ಸರ್ಜಿಕಲ್, ಏರ್ ಸ್ಟ್ರೈಕ್ ಆಯ್ತು.. ಈಗ ಪಿನ್ ಪಾಯಿಂಟ್ ದಾಳಿ ಮಾಡಿ ಉಗ್ರ ನೆಲೆಗಳ ನಾಶ!
ನವದೆಹಲಿ: ಈ ಹಿಂದೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರ ನೆಲೆಗಳ ಮೇಲೆ ಸರ್ಜಿಕಲ್ ದಾಳಿ ಮತ್ತು ವಾಯು ದಾಳಿ ನಡೆಸಿದ್ದ ಭಾರತೀಯ ಸೇನೆ ಇದೀಗ ಮತ್ತದೇ ಪಿಒಕೆಯಲ್ಲಿನ ಉಗ್ರ ನೆಲೆಗಳ ಮೇಲೆ ಮುಗಿಬಿದ್ದಿದ್ದು, ಪಿನ್ ಪಾಯಿಂಟ್ ದಾಳಿ ಮೂಲಕ ಉಗ್ರ ನೆಲೆಗಳನ್ನು ಧ್ವಂಸ ಮಾಡಿದೆ ಎಂದು ತಿಳಿದುಬಂದಿದೆ.
ಚಳಿಗಾಲದ ಆರಂಭದಿಂದಲೂ ಭಾರತದ ಗಡಿಯೊಳಗೆ ಉಗ್ರರನ್ನು ನುಸುಳಿಸಲು ಹವಣಿಸುತ್ತಿದ್ದ ಪಾಕಿಸ್ತಾನ ಸೇನೆ ಇದೇ ಕಾರಣಕ್ಕಾಗಿಯೇ ಭಾರತೀಯ ಸೇನೆಯ ಪೋಸ್ಟ್ ಗಳನ್ನು ಗುರಿಯಾಗಿಸಿಕೊಂಡು ನಿರಂತರ ದಾಳಿ ಮಾಡುತ್ತಿತ್ತು. ಇತ್ತ ಸೇನೆ ಪ್ರತಿಕಾರದಲ್ಲಿ ನಿರತರಾಗಿದ್ದರೆ ಅತ್ತ ಮತ್ತೊಂದು ತುದಿಯಲ್ಲಿ ಉಗ್ರರನ್ನು ಭಾರತದೊಳಗೆ ನುಸುಳಿಸುವುದು ಪಾಕಿಸ್ತಾನದ ಕುತಂತ್ರವಾಗಿತ್ತು. ಆದರೆ ಈ ಎಲ್ಲ ಕುತಂತ್ರಗಳಿಗೂ ತಕ್ಕಶಾಸ್ತಿ ಮಾಡುತ್ತಿರುವ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಪಿನ್ ಪಾಯಿಂಟ್ ದಾಳಿ ಮಾಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಸತ್ತಿದ್ದು ಅಮಾಯಕರಲ್ಲ ಉಗ್ರರು: ಕೇಂದ್ರ ಸರ್ಕಾರ
ಪಾಕಿಸ್ತಾನ ಸೇನೆಯ ಅಪ್ರಚೋದಿತ ದಾಳಿ ಮತ್ತು ಉಗ್ರರ ಒಳ ನುಸುಳಿವಿಕೆಯನ್ನು ತಡೆಯಲು ಭಾರತೀಯ ಸೇನೆ ಪಿಒಕೆ ಪಿನ್ ಪಾಯಿಂಟ್ ದಾಳಿ ಮಾಡಿದ್ದು, ಪಿಒಕೆಯಲ್ಲಿನ ಉಗ್ರರ ಲಾಂಚ್ ಪ್ಯಾಡ್ ಮತ್ತು ಉಗ್ರ ಶಿಬಿರಗಳನ್ನು ಗುರಿಯಾಗಿಸಿಕೊಂಡು ಸೇನೆ ದಾಳಿ ನಡೆಸಿದೆ, ಇಲ್ಲಿ ಹತ್ತಾರು ಉಗ್ರರು ಹತರಾಗಿದ್ದು, ಈ ಹತರಾದವರನ್ನೇ ಪಾಕಿಸ್ತಾನ ಅಮಾಯಕ ನಾಗರೀಕರು ಎಂದು ಬಿಂಬಿಸುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಸರ್ಜಿಕಲ್ ಸ್ಟೈಕ್ ಅಲ್ಲ, ಪಿನ್ ಪಾಯಿಂಟ್ ಸ್ಟ್ರೈಕ್
ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಶಂಕಿತ ಟೆರರ್ ಲಾಂಚ್ ಪ್ಯಾಡ್ಗಳ ಮೇಲೆ ಭಾರತೀಯ ಸೇನೆ ಈಗ ನಡೆಸಿರುವುದು ಸರ್ಜಿಕಲ್ ಸ್ಟೈಕ್ ಅಲ್ಲ. ಬದಲಾಗಿ ಪಿನ್ಪಾಯಿಂಟ್ ಪ್ರೈ. ಉಗ್ರರನ್ನು ಭಾರತದೊಳಕ್ಕೆ ಕಳುಹಿಸುವುದಕ್ಕೆ ಪಾಕಿಸ್ತಾನ ಸೇನೆ ಗರಿಷ್ಠ ಮಟ್ಟದಲ್ಲಿ ಪ್ರಯತ್ನ ನಡೆಸುತ್ತಿದೆ. ಇದನ್ನು ತಡೆಯಲು ಸೇನೆ ಈ ಕ್ರಮ ತೆಗೆದುಕೊಂಡಿದೆ. ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿರುವ ಶಂಕಿತ ಉಗ್ರ ಲಾಂಚ್ ಪ್ಯಾಡ್ಗಳ ಮೇಲೆ ಭಾರತೀಯ ಸೇನೆ ಪಿನ್ ಪಾಯಿಂಟ್ ಓಕ್ ಮಾಡುತ್ತಿರುವ ಕಾರಣ ಪಾಕಿಸ್ತಾನ ಸೇನೆಗೆ ತಲ್ಲಣಗೊಂಡಿದೆ. ಅಲ್ಲದೆ ಹತರಾದ ಉಗ್ರರನ್ನು ಸ್ಥಳೀಯ ನಾಗರಿಕರು ಎಂದು ಬಿಂಬಿಸುತ್ತ ಜಾಗತಿಕ ಮಟ್ಟದಲ್ಲಿ ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ. ಅಷ್ಟೇ ಅಲ್ಲ ವಿದೇಶ ದೇಣಿಗೆ ಪಡೆಯುವುದಕ್ಕೂ ಈ ಸನ್ನಿವೇಶವನ್ನು ಪಾಕಿಸ್ತಾನ ಬಳಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ತಾನು ಉಗ್ರರಿಗೆ ಬೆಂಬಲ ನೀಡುತ್ತಿಲ್ಲ ಎಂದು ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ಬಿಂಬಿಸಿಕೊಳ್ಳುತ್ತ ಪಿಒಕೆ ಮೂಲಕ ಭಾರತಕ್ಕೆ ಉಗ್ರರನ್ನು ಕಳುಹಿಸಿ ಜಮ್ಮು-ಕಾಶ್ಮೀರದಲ್ಲಿ ಅಸ್ಥಿರತೆ ಉಂಟುಮಾಡಲು ನಿರಂತರ ಪ್ರಯತ್ನ ಮುಂದುವರಿಸಿದೆ. ಕಳೆದ ಕೆಲವು ವಾರದ ಅವಧಿಯಲ್ಲಿ ಗಡಿಭಾಗದ ಗ್ರಾಮಗಳ ಮೇಲೆ ಪಾಕ್ ಸೇನಾ ಪಡೆ ಗುಂಡಿನ ಸುರಿಮಳೆಗೈಯುತ್ತಿವೆ. ಪಿನ್ಪಾಯಿಂಟ್ ಸ್ಟೈಕ್ ಪರಿಣಾಮ ಚೆನ್ನಾಗಿದ್ದು, ಅದಕ್ಕೆ ಪಾಕ್ ಸೇನೆ ಈ ರೀತಿ ಪ್ರತಿಕ್ರಿಯಿಸುತ್ತಿದೆ ಎಂದು ಎಂದು ಸೇನಾಮೂಲಗಳು ಬಹಿರಂಗಪಡಿಸಿದೆ.