ಪಾಕಿಸ್ತಾನ: ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ಗೆ ಮತ್ತೆ 10 ವರ್ಷ ಜೈಲು
ಲಾಹೋರ್: ಮುಂಬೈ ಉಗ್ರ ದಾಳಿಯ ಮಾಸ್ಟರ್ ಮೈಂಡ್, ಜಮಾತ್-ಉದ್-ದಾವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ಗೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಕೋರ್ಟ್ ಗುರುವಾರ ಮತ್ತೆ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಕಳೆದ ವರ್ಷ ಜುಲೈ 17ರಂದು ನಡೆದ ಭಯೋತ್ಪಾದನೆ ಕೃತ್ಯಗಳಿಗೆ ಹಣಕಾಸಿನ ನೆರವು ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 11 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈಗ ಮತ್ತೆ ಎರಡು ಪ್ರಕರಣಗಳಲ್ಲಿ ಕೋರ್ಟ್ ಹಫೀಜ್ ಗೆ ಮತ್ತೆ 10 ವರ್ಷ ಜೈಲು ಶಿಕ್ಷೆ ನೀಡಿದೆ. ಅಲ್ಲದೆ ಹಫೀಜ್ನ ಮೂವರು ಸಹಚರರಿಗೂ ನ್ಯಾಯಾಲಯ ಜೈಲು ಶಿಕ್ಷೆ ನೀಡಿದೆ.
ಹಫೀಜ್ ಹಾಗೂ ಆತನ ಇಬ್ಬರು ಸಹಚರರಾದ ಜಫರ್ ಇಕ್ಬಾಲ್ ಹಾಗೂ ಯಹ್ಯಾ ಮುಜಾಹಿದ್ಗೆ ಹತ್ತೂವರೆ ವರ್ಷ ಜೈಲು ಶಿಕ್ಷೆ ಹಾಗೂ ಹಫೀಜ್ ಭಾವ ಅಬ್ದುಲ್ ರೆಹ್ಮಾನ್ಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸಿದೆ.
ಸದ್ಯ ಲಾಹೋರ್ ಜೈಲಿನಲ್ಲಿರುವ ಹಫೀಜ್ ವಿರುದ್ಧ ಒಟ್ಟು 41 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 24 ಪ್ರಕರಣಗಳು ಈಗಾಗಲೇ ಇತ್ಯರ್ಥಗೊಂಡಿವೆ. ಇನ್ನು ಉಳದಿ ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, ಶೀಘ್ರವೇ ತೀರ್ಪು ಹೊರ ಬರಲಿದೆ.