ಹೆಣ್ಣು ಭ್ರೂಣ ಹತ್ಯೆ ತಡೆಗೆ ಮುಂಜಾಗೃತಾ ಕ್ರಮ ಅಗತ್ಯ-ಡಾ. ಪ್ರತಾಪ್ ಕುಮಾರ್

ಉಡುಪಿ: ಗಂಡು ಮತ್ತು ಹೆಣ್ಣು ಅನುಪಾತದಲ್ಲಿ ಅಸಮತೋಲನ ಉಂಟಾಗದ0ತೆ
ನೋಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆಯ ಸಲಹಾ ಸಮಿತಿ ಸಭೆಯ ಅಧ್ಯಕ್ಷ ಡಾ. ಪ್ರತಾಪ್ ಕುಮಾರ್ ಹೇಳಿದರು.

ಅವರು ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ (ಪಿ.ಸಿ & ಪಿ.ಎನ್.ಡಿ.ಟಿ) ಕಾಯಿದೆ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದಲ್ಲಿ ಹೆಣ್ಣು ಮತ್ತು ಗಂಡು ಲಿಂಗಾನುಪಾತದಲ್ಲಿ ಆಗುವ ವ್ಯತ್ಯಾಸದಿಂದ ದುಷ್ಪರಿಣಾಮವನ್ನು ತಡೆಗಟ್ಟಲು ಹೆಣ್ಣು ಭ್ರೂಣ ಹತ್ಯೆಗಳು ಆಗದಂತೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದರು.

ಜಿಲ್ಲೆಯಲ್ಲಿ ಪ್ರಸುತ್ತ 1,000 ಪುರುಷರಿಗೆ 956 ಮಹಿಳೆಯರಿದ್ದಾರೆ ಎಂದ ಅವರು ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಮಾಡುವುದು ಕಾನೂನು ಬಾಹಿರ ಹಾಗೂ ಶಿಕ್ಷಾರ್ಹ ಅಪರಾಧವಾಗಿದೆ ಎಂದರು. ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಸರಕಾರ ನಿಯಮಾನುಸಾರ ನಿಗಧಿಪಡಿಸಿರುವ ನಮೂನೆಗಳ ದಾಖಲೆಗಳ ನಿರ್ವಹಣೆಯನ್ನು ತಪ್ಪದೇ ಮಾಡಬೇಕು, ತಪ್ಪಿದ್ದಲ್ಲಿ ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಮಿತಿಯ ಸದಸ್ಯರುಗಳು ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲಿಸುವುದು ಸೇರಿದಂತೆ ಅಲ್ಲಿನ ಕಾರ್ಯಚಟುವಟಿಕೆಗಳ ಬಗ್ಗೆ ಪರಿಶೀಲಿಸಬೇಕು ಎಂದರು. ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಸರಕಾರ ಸೂಚಿಸಿರುವಂತೆ ನಿಯಮಗಳ ಫಲಕವನ್ನು ಪ್ರದರ್ಶಿಸಬೇಕು, ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೌಲಭ್ಯ ಹೊಂದಿರುವ ಎಲ್ಲಾ ಚಿಕಿತ್ಸಾಲಯಗಳು, ಜೆನಿಟಿಕ್ ಕ್ಲಿನಿಕ್‌ಗಳು ಹಾಗೂ ಜೆನಿಟಿಕ್ ಪ್ರಯೋಗಾಲಯಗಳು ಸಂಬ0ಧಪಟ್ಟ ಜಿಲ್ಲಾ ಸಕ್ಷಮ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯ ಎಂದರು.

ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸುಧೀರ್ ಚಂದ್ರ ಸೂಡಾ, ತಪಾಸಣಾ ಸಮಿತಿ ಅಧ್ಯಕ್ಷ ಡಾ.ರಾಮರಾವ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಜಿಲ್ಲಾ ವಾರ್ತಾಧಿಕಾರಿ ಬಿ. ಮಂಜುನಾಥ್, ಸದಸ್ಯರುಗಳಾದ ಡಾ. ಆಮ್ನ ಹೆಗ್ಡೆ, ಡಾ.ಶಶಿಕಲಾ ಕೆ. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!