ತುಳುಕೂಟ ಉಡುಪಿ: ಕೆಮ್ತೂರು ತುಳು ನಾಟಕ ಸ್ಪರ್ಧೆಯ ಪ್ರಶಸ್ತಿ ಪ್ರದಾನ
ಉಡುಪಿ, ಜ.26: ತುಳುಕೂಟ ಉಡುಪಿ ವತಿಯಿಂದ ಕೆಮ್ತೂರು ತುಳು ನಾಟಕ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭವು ರವಿವಾರ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಜರಗಿತು.
ಮುಖ್ಯ ಅತಿಥಿಗಳಾಗಿ ಶಾಸಕ ಯಶ್‌ಪಾಲ್ ಸುವರ್ಣ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪ್ರಥಮ ಅತ್ಯುತ್ತಮ ನಾಟಕ ಪ್ರಶಸ್ತಿ ವಿಜೇತ ಸುಮನಸಾ ಕೊಡವೂರು ತಂಡದ ‘ಈದಿ’ ನಾಟಕ ಸೇರಿದಂತೆ ವಿವಿಧ ವೈಯಕ್ತಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ರಂಗ ಕಲಾವಿದ ಭಾಸ್ಕರ ಮಣಿಪಾಲ ಅವರಿಗೆ ರಂಗ ಸನ್ಮಾನ ನೆರವೇರಿಸಲಾಯಿತು.
ತೀರ್ಪುಗಾರರಾದ ಗಣನಾಥ ಎಕ್ಕಾರು, ಡಾ.ಸುಕನ್ಯಾ ಮೇರಿ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಉದ್ಯಮಿ ಯು.ವಿಶ್ವನಾಥ ಶೆಣೈ, ಕೆಮ್ತೂರು ದೊಡ್ಡಣ ಶೆಟ್ಟಿ ಕುಟುಂಬದ ವಿಜಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ನಾಟಕ ಹಬ್ಬದ ಸಂಚಾಲಕ ಬಿ.ಪ್ರಭಾಕರ ಭಂಡಾರಿ ನಾಟಕ ಸ್ಪರ್ಧೆಯ ಕುರಿತು ಮಾತನಾಡಿದರು.
ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕೋಶಾಧಿಕಾರಿ ಚೈತನ್ಯ ಎಂ.ಜಿ. ವಿಜೇತರ ಪಟ್ಟಿ ವಾಚಿಸಿದರು. ಯಶೋಧಾ ಕೇಶವ ಸನ್ಮಾನಿತರ ಪರಿಚಯ ಮಾಡಿದರು. ಕಾರ್ಯದರ್ಶಿ ಗಂಗಾಧರ ಕಿದಿಯೂರು ವಂದಿಸಿದರು. ವಿವೇಕಾನಂದ ಎನ್. ಕಾರ್ಯಕ್ರಮ ನಿರೂಪಿಸಿದರು.