ಆರ್ಥಿಕ ಅಸಮಾನತೆ ನಿವಾರಣೆಗೆ ಪಂಚ ಗ್ಯಾರಂಟಿ ಯೋಜನೆ: ಸಚಿವ ಕೃಷ್ಣ ಬೈರೇಗೌಡ
ಉಡುಪಿ, ಜ.26: ದೇಶದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಗಾಧ ಅಂತರ ಅಳಿಯದೇ, ಆರ್ಥಿಕ ಸಮಾನತೆ ಕಾಣದೇ ಸಂವಿಧಾನದ ಆಶಯದಂತೆ ಪೂರ್ಣಪ್ರಮಾಣದ ಸಮಾನತೆ ಕಂಡುಬರುವುದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸ ಲಾಗಿದೆ ಎಂದು ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ರಸ್ತೆ ಅಪಘಾತದ ಕಾರಣದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್.ಹೆಬ್ಬಾಳ್ಕರ್ ಅವರ ಅನುಪಸ್ಥಿತಿಯಲ್ಲಿ ನಗರದ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಗಣದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿ, ಗಣರಾಜ್ಯೋತ್ಸವ ಸಂದೇಶ ನೀಡಿ ಮಾತನಾಡುತಿದ್ದರು.
ದೇಶದಲ್ಲಿ ಪ್ರಜಾಪ್ರಭುತ್ವ ಆಳವಾಗಿ ಬೇರೂರಿದ್ದು, ಸಾಕಷ್ಟು ಆರ್ಥಿಕ ಪ್ರಗತಿಯನ್ನು ಸಾಧಿಸಿದ್ದರೂ, ಸಂವಿಧಾನದ ಪ್ರಧಾನ ಆಶಯವಾದ ಸಮಾನತೆ ಕನಸು ಮಾತ್ರ ನನಸಾಗಿಲ್ಲ. ದೇಶದಲ್ಲಿ ಪ್ರಜಾಪ್ರಭುತ್ವ ಇದ್ದೂ ಆರ್ಥಿಕ ಅಸಮಾನತೆ ಹೆಚ್ಚಾಗು ತ್ತಿದೆ. ಬಡವನ ಬದುಕು ತೀರಾ ಕಷ್ಟಕ್ಕೀಡಾಗಿದ್ದರೆ, ಕೆಲವೇ ಕೆಲವು ಮಂದಿ ಶ್ರೀಮಂತರು ಅಗರ್ಭ ಶ್ರೀಮಂತರಾಗಿ, ಕುಬೇರರಾಗಿ ಮೆರೆಯುತಿದ್ದಾರೆ ಎಂದು ವಿವರಿಸಿದರು.
ದೇಶದ ಬಡಜನರ ದುಡಿಮೆ ಕೆಲವೇ ಕೆಲವು ಶ್ರೀಮಂತರ ಕೈ ಸೇರುತ್ತಿದೆ. ದೇಶದ ಆದಾಯವು ಶ್ರೀಮಂತರ ಪಾಲಾದರೆ, ದುಡಿಯುವ ವರ್ಗ ಕೇವಲ ದುಡಿಮೆಗೆ ಸೀಮಿತವಾಗಿ ಅವರ ಬೆವರಿಗೆ ಸೂಕ್ತ ಫಲ ಸಿಗದಿದ್ದರೆ ನಮ್ಮ ಸಂಧಾನದ ಆಶಯವೂ ಈಡೇರುವುದಿಲ್ಲ. ಅದು ಸಮಾನತೆಯ ದೇಶವೂ ಎನಿಸಿಕೊಳ್ಳುವುದಿಲ್ಲ ಎಂದರು.
ಇಬ್ಬರ ನಡುವಿನ ಆರ್ಥಿಕ ಅಸಮಾನತೆಯ ಅಂತರ ಹೆಚ್ಚಿದಾಗ ಜನರ ಆಕ್ರೋಶವೂ ಹೆಚ್ಚುತ್ತದೆ. ನಾಳೆಯ ದಿನಗಳಲ್ಲಿ ಇದರಿಂದ ಪ್ರಜಾಪ್ರಭುತ್ವಕ್ಕೂ ತೊಂದರೆ ಯಾಗುತ್ತದೆ. ಯಾಕೆಂದರೆ ಇದು ಶೋಷಣೆ ಎನಿಸಿಕೊಳ್ಳುತ್ತದೆ. ಶೋಷಣೆಯ ವಿರುದ್ಧ ಒಂದಲ್ಲಾ ಒಂದು ದಿನ ಜನ ಒಟ್ಟಾಗಿ ಧ್ವನಿ ಎತ್ತಿದಾಗ ದೇಶದಲ್ಲಿ ತೊಂದರೆಗಳೂ ಸಹ ಉದ್ಭವವಾಗಬಹುದು.ದೇಶದಲ್ಲಿ ಬೆಳೆಯುತ್ತಿರುವ ಆರ್ಥಿಕ ಅಸಮಾನತೆ ವಿರುದ್ಧ ನಾವೆಲ್ಲ ಇಂದೇ ಎಚ್ಚೆತ್ತುಕೊಳ್ಳಬೇಕಿದೆ.ದೇಶದ ಆಸ್ತಿ, ಆದಾಯದಲ್ಲಿ ಎಲ್ಲರಿಗೂ ಪಾಲು ಸಿಗಬೇಕು. ಈ ದಿಕ್ಕಿನಲ್ಲಿ ಹೆಚ್ಚಿನ ಪ್ರಯತ್ನ ಮಾಡೋಣ ಎಂದು ನುಡಿದರು.
ಈ ಹಿನ್ನೆಲೆಯಲ್ಲಿ ಆರ್ಥಿಕ ಅಸಮಾನತೆಯನ್ನು ಸರಿಪಡಿಸುವ ಪ್ರಯತ್ನ ವಾಗಿ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆ ಗಳನ್ನು ಯಶಸ್ವಿಯಾಗಿ ಜಾರಿ ಗೊಳಿಸಲಾಗಿದೆ ಎಂದ ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಕ್ತಿಯನ್ನು ತುಂಬಿದಾಗ ಮಾತ್ರ ಸಂವಿಧಾನದ ಆಶಯ ಈಡೇರುತ್ತದೆ. ನಮ್ಮ ಸರಕಾರ ಇದನ್ನು ಈಡೇರಿಸುವ ಕೆಲಸ ಮಾಡುತ್ತಿದೆ. ಇವತ್ತಿಗೂ ಅನೇಕ ಸಮಸ್ಯೆಗಳು ನಮ್ಮ ಸಮಾಜವನ್ನು ಕಾಡುತ್ತಿವೆ. ಆರ್ಥಿಕ ಅಸಮಾನತೆ, ಪ್ರಾದೇಶಿಕ ಅಸಮಾನತೆ, ಸಮಾಜದಲ್ಲಿ ಸಂಘರ್ಷಗಳು, ಬಡತನ ಜನರನ್ನು ಇಂದಿಗೂ ಸಹ ಕಾಡುತ್ತಿದೆ. ಇಂತಹ ಸಮಸ್ಯೆಗಳನ್ನು ನಿವಾರಿಸುವ ಪ್ರಯತ್ನವನ್ನು ನಾವು ರಾಜ್ಯದಲ್ಲಿ ಮಾಡುತ್ತಿದ್ದೇವೆ ಎಂದರು.
ಭೂಸುರಕ್ಷಾ ಯೋಜನೆ: ಕಂದಾಯ ಇಲಾಖೆಯಲ್ಲಿ ಶೇ.30ರಷ್ಟು ಜಮೀನಿನ ಮಾಲಕರ ಹಳೆ ದಾಖಲೆಗಳು ತಾಲೂಕು ಕಚೇರಿಗಳಲ್ಲಿ ದಾಖಲೆ ಇಲ್ಲದಿರುವುದು ತಿಳಿದುಬಂದಿದೆ. ಹೀಗಾಗಿ ತಹಶೀಲ್ದಾರರ ಕಚೇರಿಯಲ್ಲಿ ಇರುವ ಎಲ್ಲಾ ದಾಖಲೆ ಗಳನ್ನು ಡಿಜಿಟಲೀಕರಣ ಮಾಡುವ ಭೂ ಸುರಕ್ಷಾ ಯೋಜನೆಗೆ ರಾಜ್ಯಾದ್ಯಂತ ಚಾಲನೆ ನೀಡಲಾಗಿದೆ ಎಂದರು.
ಉಡುಪಿ ಜಿಲ್ಲೆಯು ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಹೆಸರುವಾಸಿಯಾಗಿದೆ. ಕಲೆ, ಸಂಸ್ಕೃತಿ ವಿಷಯಕ್ಕೆ ಬಂದಲ್ಲಿ ರಾಜ್ಯಕ್ಕೆ ಹಾಗೂ ದೇಶಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿರುವ ಉಡುಪಿ ಜಿಲ್ಲೆ ಉಳಿದರವರಿಗೆ ಮೇಲ್ಪಂಕ್ತಿಯನ್ನು ಹಾಕಿ ಕೊಟ್ಟಿದೆ ಎಂದು ಜಿಲ್ಲೆಯ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಸಂವಿಧಾನದ ಆಶಯದಂತೆ ಸಮಾನತೆ, ಪ್ರಜಾಪ್ರಭುತ್ವ ಇವರೆಡು ಆಶಯಗಳನ್ನು ಈಡೇರಿಸುವ ದಿಕ್ಕಿನಲ್ಲಿ ಹೆಚ್ಚಿನ ಪ್ರಯತ್ನ ಮಾಡಲು ನಮ್ಮನ್ನು ನಾವು ಸಮರ್ಪಣೆ ಮಾಡುವ ಪ್ರೇರಣೆಯ ದಿನವಾಗಿ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಬೇಕಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಶಾಸಕ ಯಶ್‌ಪಾಲ್ ಎ ಸುವರ್ಣ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಜಿಲ್ಲಾಧಿ ಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ಕರಾವಳಿ ಕಾವಲು ಪೊಲೀಸ್ ಅಧೀಕ್ಷಕ ಮಿಥುನ್ ಹೆಚ್.ಎನ್, ಕಾರ್ಕಳ ವೈಲ್ಡ್‌ಲೈಫ್ ಡಿ.ಎಫ್.ಓ ಶಿವರಾಮ ಎಂ ಬಾಬು, ಹಾಗೂ ಇತರರು ಉಪಸ್ಥಿತರಿದ್ದರು.
1.22 ಕೋಟಿ ಗೃಹಲಕ್ಷ್ಮೀ ಫಲಾನುಭವಿಗಳು
ರಾಜ್ಯದಲ್ಲಿ ಆರ್ಥಿಕ ಸಮಾನತೆ ಎಲ್ಲರಿಗೂ ದೊರಕುವಂತಾಗಲು ಜಾರಿ ಗೊಳಿಸಲಾದ ಪಂಚ ಗ್ಯಾರಂಟಿ ಯೋಜನೆಯಲ್ಲಿ ಗೃಹಲಕ್ಷ್ಮೀ ಯೋಜನೆ ಯಡಿ ರಾಜ್ಯದ ಬಡ ಹೆಣ್ಣುಮಕ್ಕಳಿಗೆ ಪ್ರತೀ ತಿಂಗಳು 2000 ರೂ.ಗಳ ನೆರವನ್ನು 1.22 ಕೋಟಿಗೂ ಅಧಿಕ ಮಹಿಳೆಯರಿಗೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಹೆಣ್ಣು ಮಕ್ಕಳು ಉಚಿತವಾಗಿ ಸಂಚರಿಸಲು ಅನುಕೂಲವಾಗು ವಂತೆ ಶಕ್ತಿ ಯೋಜನೆ ಜಾರಿಗೆ ತಂದಿದ್ದು, ರಾಜ್ಯದಲ್ಲಿ ಈವರೆಗೆ 365.42 ಕೋಟಿ ಮಹಿಳಾ ಪ್ರಯಾಣಿಕರು ಸರಕಾರಿ ಬಸ್‌ಗಳಲ್ಲಿ ಉಚಿತ ಸಾರಿಗೆಯ ಸೌಲಭ್ಯವನ್ನು ಪಡೆದಿದ್ದಾರೆ ಎಂದರು.
ಮನೆಯ ಖರ್ಚನ್ನು ಕಡಿಮೆ ಮಾಡಲು ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದಿದ್ದು, ರಾಜ್ಯದಲ್ಲಿ ಸುಮಾರು 1.63 ಕೋಟಿಗೂ ಅಧಿಕ ಕುಟುಂಬಗಳಿಗೆ ಉಚಿತ ವಿದ್ಯುತ್ ಸೌಲಭ್ಯ ನೀಡಲಾಗಿದೆ. ಬಡವರಿಗೆ 5 ಕೆ.ಜಿ ಅಕ್ಕಿಯ ಜೊತೆಗೆ ಮನೆಗೆ ಅಗತ್ಯವಿರುವ ಇತರೆ ಧವಸಧಾನ್ಯಗಳನ್ನು ಕೊಳ್ಳಲು ಅನುಕೂಲವಾಗುವಂತೆ ಅನ್ನಭಾಗ್ಯ ಯೋಜನೆಯಡಿ ಸುಮಾರು 1.19 ಕೋಟಿ ಪಡಿತರ ಚೀಟಿದಾರರ 4.30 ಕೋಟಿ ಜನರಿಗೆ ಪ್ರತೀ ತಿಂಗಳು ಅವರ ಖಾತೆಗೆ ತಲಾ 170 ರೂ.ನಂತೆ ಜಮಾ ಮಾಡಲಾಗುತ್ತಿದೆ.
ಪದವೀಧರ ನಿರುದ್ಯೋಗಿ ಯುವಜನರಿಗೂ ‘ಯುವನಿಧಿ’ಯ ಮೂಲಕ ಆರ್ಥಿಕ ನೆರವನ್ನು ನೀಡಲಾಗುತ್ತಿದ್ದು, ರಾಜ್ಯದಲ್ಲಿ 1.65 ಲಕ್ಷ ಅಭ್ಯರ್ಥಿಗಳಿಗೆ ಈವರೆಗೆ 252 ಕೋಟಿ ರೂ. ಹಣವನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗಿದೆ ಎಂದರು.