ಕ್ರೀಡೆ ಜೀವನದಲ್ಲಿ ಶಕ್ತಿ ಮತ್ತು ಉತ್ಸಾಹವನ್ನು ತುಂಬುತ್ತದೆ- ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಉಡುಪಿ: ಖೇಲೋ ಇಂಡಿಯಾ ಅಭಿಯಾನ ಕ್ರೀಡೆಯತ್ತ ಯುವಜನತೆಯನ್ನು ಆಕರ್ಷಿಸುವಲ್ಲಿ ಮತ್ತು ದೇಶದ ಮೂಲೆ ಮೂಲೆಯ ಯುವ ಪ್ರತಿಭೆಗಳನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅದರ ಫಲಿತಾಂಶ ಇಂದು ನಮ್ಮೆಲ್ಲರ ಮುಂದಿದೆ. ಭಾರತೀಯ ಆಟಗಾರರು ಏಷ್ಯನ್, ಒಲಿಂಪಿಕ್ ಮತ್ತು ಪ್ಯಾರಾಒಲಿಂಪಿಕ್ ಕ್ರೀಡಾಕೂಟ ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶ್ಲಾಘಿಸಿದರು. 

ಗುರುವಾರ ಅಜ್ಜರಕಾಡು ಜಿಲ್ಲಾ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ ಸಂಸ್ಥೆ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಡಳಿತ ಆಯೋಜಿಸಿದ್ದ ಕರ್ನಾಟಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕ್ರೀಡೆಯಲ್ಲಿ ದಿವ್ಯಾಂಗ ಆಟಗಾರರನ್ನು ಪ್ರೋತ್ಸಾಹಿಸಲು ದೇಶದಲ್ಲಿ ದಿವ್ಯಾಂಗರಿಗಾಗಿ ಕ್ರೀಡಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಅವುಗಳಲ್ಲೊಂದಾ ಗಿರುವ ಮಧ್ಯಪ್ರದೇಶದ ಗ್ವಾಲಿಯರ್ ಕೇಂದ್ರದಲ್ಲಿ  ದಿವ್ಯಾಂಗ ಆಟಗಾರರಿಗೆ ತರಬೇತಿ ನೀಡಿ, ಅವರನ್ನು ಕ್ರೀಡೆಗೆ ಸಿದ್ಧಪಡಿಸಲಾಗುತ್ತಿದೆ ಎಂದರು. 

ಕ್ರೀಡೆಗಳನ್ನು ಜೀವನದಲ್ಲಿ ನಿಯಮಿತವಾಗಿ ಅಳವಡಿಸಿಕೊಳ್ಳಬೇಕು, ಕ್ರೀಡೆಗಳು ಜೀವನದಲ್ಲಿ ಶಕ್ತಿ ಮತ್ತು ಉತ್ಸಾಹವನ್ನು ತುಂಬುತ್ತವೆ. ಮನೋರಂಜನೆ ಯ ಜೊತೆಗೆ ಶಾರೀರಿಕ, ಮಾನಸಿಕ, ಬೌದ್ಧಿಕ ಮತ್ತು ಸಾಮಾಜಿಕ ವಿಕಾಸದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು. 

ಅಲ್ಲದೇ ಆಟೋಟಗಳು ಶಿಸ್ತು, ಸಂಯಮ, ಸಂಘರ್ಷ ಮತ್ತು ಸಕರಾತ್ಮಕ ದೃಷ್ಠಿಕೋನವನ್ನು ನೀಡುತ್ತವೆ. ಒಬ್ಬಂಟಿತನ ಮತ್ತು ಚಿಂತೆಯನ್ನು ದೂರ ಮಾಡುತ್ತವೆ. ಏಕಾಗ್ರತೆ, ಸಹಕಾರ ಹಾಗೂ ತಂಡವಾಗಿ ಕೆಲಸ ಮಾಡುವ, ಸಕಾಲಿಕ ನಿರ್ಣಯವನ್ನು ತೆಗೆದುಕೊಳ್ಳುವ ಶಕ್ತಿಯನ್ನು ಬೆಳೆಸುತ್ತವೆ ಎಂದವರು ವಿಶ್ಲೇಷಿಸಿದರು.

ಒತ್ತಡ ಮತ್ತು ಆತಂಕ ಕಡಿಮೆ ಮಾಡಿ, ಮನಸ್ಸನ್ನು ಕೇಂದ್ರೀಕರಿಸುವ ಸಾಮರ್ಥ್ಯವನ್ನು ಕ್ರೀಡೆ ಹೆಚ್ಚಿಸುತ್ತದೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಿಸಿ, ಜೀವನದಲ್ಲಿ ಶಕ್ತಿ ಮತ್ತು ಉತ್ಸಾಹವನ್ನು ತುಂಬುತ್ತದೆ ಎಂದರು. 

ಗೃಹಸಚಿವ ಡಾ. ಜಿ.ಪರಮೇಶ್ವರ್ ಮಾತನಾಡಿ ಜಾತಿ, ಧರ್ಮ ಇಲ್ಲದ ಒಂದೇ ಒಂದು ಕ್ಷೇತ್ರ ಕ್ರೀಡೆ. ಈ ಕ್ಷೇತ್ರದಲ್ಲಿ ಇಂದಿನ ಯುವಪೀಳಿಗೆ ಹೆಚ್ಚು ತೊಡಗಿಸಿ ಕೊಂಡಲ್ಲಿ ಜಾತಿಗಳ ಭೇದ ಭಾವಗಳನ್ನು ತೊಲಗಿಸಬಹುದು ಎಂದರು.

ಯುವಜನತೆ ಹೆಚ್ಚು ಮದ್ಯವಸ್ಯನಿಗಳಾಗುತ್ತಿದ್ದಾರೆ. ಕೆಲವು ಕಾಲೇಜುಗಳಲ್ಲೇ ವಿದ್ಯಾರ್ಥಿಗಳನ್ನು ವ್ಯಸನಿಯಾಗಿಸಲಾಗುತ್ತಿದೆ. ಅದರ ವಿರುದ್ದ ಪೋಲಿಸ್ ಇಲಾಖೆ ದೊಡ್ಡ ಮಟ್ಟದಲ್ಲಿ ಸಮರ ಸಾರಿದೆ. ಅದೆಲ್ಲದ ರಿಂದ ವಿದ್ಯಾರ್ಥಿಗಳು ದೂರ ಇರುವಂತಾಗಲು ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಉಡುಪಿಗೊಂದು ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣ ಒದಗಿಸುವಂತೆ ಮನವಿ ಮಾಡಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ ಮತ್ತು ಕಿರಣ್ ಕುಮಾರ್ ಕೊಡ್ಗಿ, ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಫೀಬಾ ಏಷ್ಯಾ ಮತ್ತು ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಡಾ.ಕೆ.ಗೋವಿಂದರಾಜ್, ಮಾಜಿ ಸಚಿವರಾದ ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ, ಕೊಂಕಣಿ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನ್ಲಿ ಅಲ್ವಾರಿಸ್, ಬ್ಯಾರಿ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್, ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್, ಸಹಕುಲಪತಿ ಲೆ.ಜ.ಡಾ. ಎಮ್.ಡಿ ವೆಂಕಟೇಶ್, ಪಶ್ಚಿಮ ವಲಯ ಐಜಿಪಿ ಅಮೃತ್ ಸಿಂಗ್, ಜಿಲ್ಲಾ ಎಸ್ಪಿ ಡಾ.ಅರುಣ್, ಕರಾವಳಿ ಕಾವಲುಪಡೆ ಎಸ್ಪಿ ಮಿಥುನ್, ಎಎನ್ಎಫ್ ಎಸ್ಪಿ ಜಿತೇಂದ್ರ ದಯಾಮ, ಜಿ.ಪಂ ಸಿಇಓ ಪ್ರತೀಕ್ ಬಾಯಲ್, ದ.ಕ. ಜಿಲ್ಲಾಧಿಕಾರಿ ಮುಲೈ ಮುಗಿಲನ್  ಮೊದಲಾದವರಿದ್ದರು.

ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಸ್ವಾಗತಿಸಿದರು. ಯುವಜನ ಸೇವೆ ಮತ್ತು ಕ್ರೀಡಾಧಿಕಾರಿ ಡಾ.ರೋಶನ್ ಶೆಟ್ಟಿ ಕ್ರೀಡಾಳುಗಳ ಪಟ್ಟಿ ವಾಚಿಸಿದರು.

Leave a Reply

Your email address will not be published. Required fields are marked *

error: Content is protected !!