ದೇಶದಾದ್ಯಂತ ಮತದಾನದಲ್ಲಿ ಮೋಸ ನಡೆದಿದೆ: ಡೊನಾಲ್ಡ್ ಟ್ರಂಪ್
ಯಾವುದೇ ಚುನಾವಣೆ ಬಳಿಕ ಸೋಲನ್ನುಂಡ ಪಕ್ಷ ಅಥವಾ ಅಭ್ಯರ್ಥಿಗಳು ಮತದಾನದಲ್ಲಿ ಲೋಪ ನಡೆದಿದೆ, ವಂಚನೆ ನಡೆದಿದೆ ಎಂಬ ಹೇಳಿಕೆ ನೀಡೋದು ಸಾಮಾನ್ಯ. ಅದಂತೆ ಅಮೇರಿಕಾ ಅಧ್ಯಕ್ಷೀಯ ಚುನಾವಣೆಯ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿರುವ ಡೊನಾಲ್ಡ್ ಟ್ರಂಪ್, ಮತದಾನದಲ್ಲಿ ವಂಚನೆ ನಡೆದಿದೆ ಎಂಬ ಆರೋಪವನ್ನು ಪುನರುಚ್ಛರಿಸಿದ್ದಾರೆ.
ನಾನು ಬೈಡನ್ ವಿರುದ್ಧ ಚುನಾವಣೆಯಲ್ಲಿ ಗೆದ್ದಿದ್ದೇನೆ ಎಂಬ ತಮ್ಮ ವಾದವನ್ನು ಮುಂದುವರಿಸಿರುವ ಡೊನಾಲ್ಡ್ ಟ್ರಂಪ್, ದೇಶದಾದ್ಯಂತ ಮತದಾನದಲ್ಲಿ ಮೋಸ ನಡೆದಿದೆ. ನಾನು ಚುನಾವಣೆ ಗೆದ್ದಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಪೋಸ್ಟ್ ಜತೆಗೆ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ವರದಿಯ ತುಣಕು ಹಾಗೂ ಅಮೆರಿಕದ ನಕ್ಷೆಯೊಂದಿಗೆ ಟ್ಯಾಗ್ ಮಾಡಿದ್ದಾರೆ.
ಚುನಾವಣೆ ನಂತರ ಹಾಗೂ ಮತ ಎಣಿಕೆ ಮುಗಿದು, ಮಾಧ್ಯಮಗಳಲ್ಲಿ ಬೈಡನ್ ಕಮಲಾ ಜೋಡಿ ವಿಜೇತರಾಗಿದ್ದಾರೆ ಎಂದು ಪ್ರಕಟವಾದ ನಂತರವೂ, ಟ್ರಂಪ್ ಅವರು ಚುನಾವಣಾ ಸೋಲನ್ನು ಒಪ್ಪಿಕೊಂಡಿಲ್ಲ. ಜೊತೆಗೆ ಮತದಾನದಲ್ಲಿ ಅಕ್ರಮ ನಡೆದಿದೆ ಎಂಬ ಟ್ರಂಪ್ ಮತ್ತು ಅವರ ತಂಡದ ಆರೋಪಕ್ಕೆ ಯಾವುದೇ ಪುರಾವೆಗಳೂ ಇಲ್ಲ ಎಂದು ಚುನಾವಣಾ ಅಧಿಕಾರಿಗಳು ವಾದಿಸುತ್ತಿದ್ದಾರೆ. ಆದರೆ, ಈ ನಡುವೆ ಟ್ರಂಪ್ ಅವರ ಚುನಾವಣಾ ತಂಡದವರು, ಪ್ರಮುಖ ರಾಜ್ಯಗಳಲ್ಲಿ ಬಂದಿರುವ ಫಲಿತಾಂಶದ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.