ಸ್ಯಾಮ್‌ಸಂಗ್‌ನ ಧೋರಣೆಯಿಂದ ಮೊಬೈಲ್ ಫೋನ್ ಚಿಲ್ಲರೆ ವ್ಯಾಪಾರಿಗಳ ಹಿತಕ್ಕೆ ಧಕ್ಕೆ
ಮಂಗಳೂರು: ಸ್ಯಾಮ್‌ಸಂಗ್‌ನ ಧೋರಣೆಯಿಂದ ಮೊಬೈಲ್ ಪೋನ್ ಚಿಲ್ಲರೆ ವ್ಯಾಪಾರಿಗಳ ಹಿತಕ್ಕೆ ಧಕ್ಕೆ ಉಂಟಾಗಿದೆ ಎಂದು ಅಭಿಪ್ರಾಯಪಟ್ಟಿರುವ ದ.ಕ. ಆ್ಯಂಡ್ ಉಡುಪಿ ಮೊಬೈಲ್ ರಿಟೈಲರ್ಸ್ ಅಸೋಸಿಯೇಶನ್ ತಮ್ಮ ಬೇಡಿಕೆಗಳ ಈಡೇರಿಕೆಗೆ ಭಾರತದ ಸ್ಯಾಮ್‌ಸಂಗ್ ಕಂಪೆನಿಯನ್ನು ಆಗ್ರಹಿಸಿದೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಆ್ಯಂಡ್ ಉಡುಪಿ ಮೊಬೈಲ್ ರಿಟೈಲರ್ಸ್ ಅಸೋಸಿಯೇಶನ್ ನ ಉಪಾಧ್ಯಕ್ಷ ಮುಹಮ್ಮದ್ ಇಫ್ತಿಯಝ್ ಅವರು ಆನ್‌ಲೈನ್‌ನಲ್ಲಿ ಕಡಿಮೆ ದರಕ್ಕೆ ಹೊಸ ಮಾದರಿಯ ಮೊಬೈಲ್ ಪೋನ್‌ಗಳನ್ನು ನೀಡುತ್ತಿದ್ದು, ಆದರೆ ಮೈನ್‌ಲೈನ್‌ನಲ್ಲಿ ಮೊಬೈಲ್ ಫೋನ್‌ನ್ನು ಅಧಿಕ ಬೆಲೆಗೆ ನೀಡುತ್ತಿರುವ ಹಿನ್ನೆಲೆಯಲ್ಲಿ ಚಿಲ್ಲರೆ ವ್ಯಾಪಾರಿಗಳಿಗೆ ಸಮಸ್ಯೆ ಆಗಿದೆ ಎಂದು ಹೇಳಿದರು.
ಸ್ಥಳೀಯ ಚಿಲ್ಲರೆ ವ್ಯಾಪಾರಿಗಳಿಗೆ ಸಮರ್ಪಕವಾದ ಸ್ಟಾಕ್‌ಗಳು ದೊರೆಯುತ್ತಿಲ್ಲ. ಆದರೆ ಆನ್‌ಲೈನ್‌ನಲ್ಲಿ ವಿಶೇಷ ಮಾದರಿಗಳ ಫೋನ್‌ಗಳು ಕಡಿಮೆ ದರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತಿದೆ ಎಂದರು.
ಸ್ಯಾಮ್‌ಸಂಗ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಭಾರೀ ರಿಯಾಯತಿಗಳು ಸ್ಥಳೀಯ ವ್ಯವಹಾರಕ್ಕೆ ಹಾನಿ ಮಾಡುತ್ತವೆ. ಸಗಟು ವ್ಯಾಪಾರಿಗಳಿಗೆ ನೇರ ಕೊಡುಗೆಗಳು ಬೆಲೆ ಸವಾಲುಗಳನ್ನು ಇನ್ನಷ್ಟು ಹದಗೆಡಿಸುತ್ತಿವೆ ಮತ್ತು ಸೇವಾ ಕೇಂದ್ರ ಗಳಲ್ಲಿ ಎಸ್ 25 ಪೂರ್ವ -ಬುಕಿಂಗ್ ಅವಕಾಶ ನೀಡಿರುವುದು ಚಿಲ್ಲರೆ ವ್ಯಾಪಾರಿಗಳ ವ್ಯವಹಾರಕ್ಕೆ ಪೆಟ್ಟು ಬಿದ್ದಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಸಮಿತಿ ಸದಸ್ಯ ಭರತ್, ಮಾಜಿ ಕೋಶಾಧಿಕಾರಿ ಮುಹಮ್ಮದ್ ಅಝರುದ್ದೀನ್, ಸಮಿತಿ ಸದಸ್ಯರಾದ ಪ್ರಭಾಕರ ಶೆಟ್ಟಿ, ವೇಣುಗೋಪಾಲ್ ಯಾದವ್ ಉಪಸ್ಥಿತರಿದ್ದರು.