ಉಚ್ಛಾಟಿತ ಮಾಜಿ ಶಾಸಕರಿಂದ ಕೃತಘ್ನತೆಯ ಪಾಠ ಹಾಸ್ಯಾಸ್ಪದ: ದಿನೇಶ್ ಅಮೀನ್

Oplus_131072

ಬಿಜೆಪಿ ಪಕ್ಷದಿಂದ ನಗರಸಭೆ ಸದಸ್ಯ, 3 ಬಾರಿ ಶಾಸಕ, ಪಕ್ಷದ ಜಿಲ್ಲಾಧ್ಯಕ್ಷ ಸಹಿತ ವಿವಿಧ ಹುದ್ದೆಗಳನ್ನು ಅಲಂಕರಿಸಿ ಅಧಿಕಾರ ದಾಹದಿಂದ ಬಂಡಾಯ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿದ ಬಿಜಿಪಿಯ ಉಚ್ಛಾಟಿತ ಮಾಜಿ ಶಾಸಕರು ಹಾಲಿ ಶಾಸಕರಿಗೆ ಕೃತಘ್ನತೆಯ ಪಾಠ ಹೇಳಲು ಹೊರಟಿರುವುದು ಹಾಸ್ಯಾಸ್ಪದ ಎಂದು ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ದಿನೇಶ್ ಅಮೀನ್ ವ್ಯಂಗ್ಯವಾಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಹೊಸ ಅಭ್ಯರ್ಥಿಗಳಿಗೆ ಅವಕಾಶ ನೀಡಿದ ಸಂದರ್ಭದಲ್ಲಿ ತಮ್ಮ ಪಕ್ಷ ನಿಷ್ಠೆಯ ಬಗ್ಗೆ ಭಾಷಣ ಮಾಡಿದ್ದ 10 ತಿಂಗಳಿನಲ್ಲಿಯೇ ಪಕ್ಷ ನೀಡಿದ್ದ ಅವಕಾಶಗಳನ್ನು ಮರೆತು ಪಕ್ಷಕ್ಕೆ ದ್ರೋಹ ಮಾಡಿ ಕಾರ್ಯಕರ್ತರಿಗೆ ನೋವುಂಟು ಮಾಡಿದ್ದಾರೆ.

ಪಕ್ಷದಲ್ಲಿ ಹಲವು ವರ್ಷಗಳಿಂದ ಕಾರ್ಯಕರ್ತರಾಗಿ ದುಡಿದ ಯಶ್ ಪಾಲ್ ಸುವರ್ಣ ಪಕ್ಷದ ಹಾಗೂ ಹಿರಿಯರ ಸೂಚನೆಯ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಪಕ್ಷದ ಕಾರ್ಯಕರ್ತರ ಶ್ರಮ ಹಾಗೂ ಉಡುಪಿ ಜನತೆಯ ಆಶೀರ್ವಾದದಿಂದ ಗೆದ್ದು ಶಾಸಕರಾಗಿ ಉತ್ತಮ ಕೆಲಸ ಮಾಡುತ್ತಿದ್ದು, ಇದೀಗ ಮಾಜಿ ಶಾಸಕರು ಹತಾಶರಾಗಿ ಶಾಸಕರ ಬಗ್ಗೆ ಕೀಳು ಮಟ್ಟದ ಆರೋಪ ಮಾಡುತ್ತಿರುವುದು ದುರದೃಷ್ಟಕರ.

ಉಡುಪಿ ನಗರದಲ್ಲಿ ಜಾಹಿರಾತು ಲಾಬಿಗೆ ಮಣಿದು ತೀರ ಅವೈಜ್ಞಾನಿಕವಾಗಿ ಟ್ರಾಫಿಕ್ ಸಿಗ್ನಲ್ ಬೃಹತ್ ಕಂಬಗಳನ್ನು ರಾಷ್ಟೀಯ ಹೆದ್ದಾರಿಯ ಅನುಮತಿ ಪಡೆಯದೆ ಅಳವಡಿಸಿ ವಾಹನ ಸಂಚಾರಕ್ಕೆ ತೊಡಕಾಗುತ್ತಿರುವ ಹಿನ್ನಲೆಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಪೋಲಿಸ್ ಇಲಾಖೆ ಮಾರ್ಗಸೂಚಿಯಂತೆ ಟ್ರಾಫಿಕ್ ಸಿಗ್ನಲ್ ಅಳವಡಿಸಲು ಶಾಸಕರು ಸೂಚನೆ ನೀಡಿದ್ದು ತಪ್ಪೇ, ಕಾನೂನು ನಿಯಮ ಮೀರಿ ನಕಲಿ ದಾಖಲೆ ಸೃಷ್ಟಿಸಿ ಬಡಾನಿಡಿಯೂರು ಗ್ರಾಮದಲ್ಲಿ ಮಾಜಿ ಶಾಸಕರ ಒಡೆತನದ ಅಕ್ರಮ ರೆಸಾರ್ಟ್ ನಿರ್ಮಾಣದ ಬಗ್ಗೆ ಸ್ಥಳೀಯ ಸಂಘ ಸಂಸ್ಥೆಗಳ ದೂರಿನ ಬಗ್ಗೆ ಮೌನ ವಹಿಸಬೇಕಿತ್ತೆ, ಉಡುಪಿ ಪರಿವಾರ್ ಸೊಸೈಟಿಯ ವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಸಾರ್ವಜನಿಕರ ದೂರು ಮತ್ತು ಮಾಜಿ ಶಾಸಕರ ಆಪ್ತರಾಗಿದ್ದ ವ್ಯಕ್ತಿಗಳ ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘದ ನೂರಾರು ಕೋಟಿ ವಂಚನೆ ಪ್ರಕರಣದ ಬಗ್ಗೆ ಸಂತ್ರಸ್ತರ ಪರವಾಗಿ ಸರ್ಕಾರಕ್ಕೆ ಉನ್ನತ ತನಿಖೆ ಹಾಗೂ ಹಣ ಮರು ಪಾವತಿಗೆ ಆಗ್ರಹ, ಸಣ್ಣ ನೀರಾವರಿ ಇಲಾಖೆಯ ನೀಲಾವರ, ಹೇರೂರು ಅಣೆಕಟ್ಟು, ಅಂಬಲಪಾಡಿ ಪಡುಕೆರೆಯ ಕಳಪೆ ಕಾಮಗಾರಿಯ ಬಗ್ಗೆ ಸ್ಥಳೀಯರ ದೂರುಗಳ ಬಗ್ಗೆ ತನಿಖೆಗೆ ಆಗ್ರಹಿಸಿರುವುದನ್ನೇ ತಮ್ಮ ವಿರುದ್ಧದ ದ್ವೇಷ ರಾಜಕಾರಣ ಎಂದು ಆರೋಪ ಮಾಡುತ್ತಿರುವುದು ಎಷ್ಟು ಸರಿ.

ಉಡುಪಿ ಶಾಸಕರ ದ್ವೇಷ ರಾಜಕಾರಣದ ಬಗ್ಗೆ ತಮ್ಮಲಿ ಯಾವುದೇ ದಾಖಲೆ ಇದ್ದರೆ ಜನತೆಯ ಮುಂದೆ ಇಡಿ, ನೆರೆಯ ಕ್ಷೇತ್ರದ ಮಾಜಿ ಶಾಸಕರು ಇಂದಿಗೂ ತಮ್ಮ ಪಕ್ಷ ನಿಷ್ಠೆಯಿಂದ ಹಾಲಿ ಶಾಸಕರಿಗೆ ಸದಾ ಸಹಕಾರ ಸಲಹೆ ಸೂಚನೆ ನೀಡುತ್ತಾ, ಹಸ್ತಕ್ಷೇಪ ಮಾಡದೇ ತಮ್ಮ ರಾಜಕೀಯ ಪ್ರಬುದ್ಧತೆ ಮೆರೆದಿದ್ದಾರೆ.

ಓರ್ವ ವ್ಯಕ್ತಿ ಶಾಸಕ ಸ್ಥಾನದವರೆಗೂ ಸಾಗಿ ಬರಲು ಪಕ್ಷದ ಹಲವಾರು ಕಾರ್ಯಕರ್ತರ ತ್ಯಾಗ, ಹಿರಿಯರ ಪರಿಶ್ರಮವಿದೆ. ಈ ಹಿಂದೆ ಮಾಜಿ ಶಾಸಕರು 3 ಬಾರಿ ಆಯ್ಕೆಯಾಗುವ ಸಂದರ್ಭದಲ್ಲಿಯೂ ಜೊತೆ ನಿಂತ ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ ಕೃತಘ್ನರಾಗಿ, ಪಕ್ಷವನ್ನು ಉಡುಪಿಯಲ್ಲಿ ತಳಮಟ್ಟದಲ್ಲಿ ಸಂಘಟಿಸಲು ಹಗಲಿರುಳು ಶ್ರಮಿಸಿದ ಡಾ. ವಿ. ಎಸ್. ಆಚಾರ್ಯ, ಕರಂಬಳ್ಳಿ ಸಂಜೀವ ಶೆಟ್ಟಿ, ಸೋಮ ಶೇಖರ ಭಟ್, ವಿಠಲ ಶೆಟ್ಟಿಗಾರ್, ಕೆ. ಟಿ. ಪೂಜಾರಿ, ರವಿ ಅಮೀನ್ ಮೊದಲಾದ ಮಹನೀಯರ ತ್ಯಾಗದ ಫಲವಾಗಿ ಅಧಿಕಾರವನ್ನು ಅನುಭವಿಸುವಂತಾಗಿದೆ ಎಂಬುದನ್ನು ಮರೆಯಬಾರದು.

2008,2013,2018 ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡರಾಗಿದ್ದ ಪ್ರಮೋದ್ ಮಧ್ವರಾಜ್ ಅಭ್ಯರ್ಥಿಯಾಗಿದ್ದ ಸಂದರ್ಭದಲ್ಲಿಯೂ ಮಾಜಿ ಶಾಸಕರ ಪರವಾಗಿ ಮುಂಚೂಣಿಯಲ್ಲಿ ನಿಂತು ತಮ್ಮ ಗೆಲುವಿಗೆ ಹಾಲಿ ಶಾಸಕರು ಶ್ರಮಿಸಿ ಎಂದಿಗೂ ಅಡ್ಜೆಸ್ಟ್ ಮೆಂಟ್ ರಾಜಕೀಯ ಮಾಡದೇ, ಅಕ್ರಮ ಚಟುವಟಿಕೆ, ಕಳಪೆ ಕಾಮಗಾರಿ ಹಗರಣ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ , ಹಿಂದುತ್ವ, ಪಕ್ಷ ಸಂಘಟನೆ ವಿಚಾರದಲ್ಲಿ ರಾಜೀ ಮಾಡದೇ ಉಡುಪಿ ಕ್ಷೇತ್ರದ ಸಮಗ್ರ ಅಭಿವೃದ್ದಿಯ ಕನಸು ಹೊತ್ತು ಕಾರ್ಯ ನಿರ್ವಹಿಸುತ್ತಿರುವ ಶಾಸಕರ ಬಗ್ಗೆ ಕಾರ್ಯಕರ್ತರಿಗೆ ಹೆಮ್ಮೆ ಇದೆ. ಶಾಸಕರು ಎಂದಿಗೂ ಪಕ್ಷಕ್ಕೆ ಮುಜುಗರ ತರುವಂತಹ ಕಾರ್ಯಕರ್ತರ ಹಾಗೂ ಉಡುಪಿ ಜನತೆ ತಲೆ ತಗ್ಗಿಸುವ ಹೀನ ಕೆಲಸ ಮಾಡುವುದಿಲ್ಲ ಎಂಬ ಭರವಸೆಯೂ ಇದೆ.

ಮಾಜಿ ಶಾಸಕರ ರಾಜಕೀಯ ಜೀವನದ ಸಂಕಷ್ಟ ದಿನಗಳಲ್ಲಿ ಜೊತೆ ನಿಂತು ಬೆಂಬಲ ನೀಡಿದ ಶಾಸಕರ ಕೃತಜ್ಞತೆಯ ಬಗ್ಗೆ ಉಡುಪಿ ಜನತೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ತಿಳಿದಿದ್ದು, ಮಾಜಿ ಶಾಸಕರ ಈ ಆಧಾರ ರಹಿತ ಆರೋಗಳು ಅವರ ಘನತೆಗೆ ಶೋಭೆ ತರುವುದಿಲ್ಲ ಎಂದು ದಿನೇಶ್ ಅಮೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!