ಮಸಾಜ್ ಪಾರ್ಲರ್ ಮೇಲೆ ದಾಳಿ ಪ್ರಕರಣ: ಆರೋಪಿಗಳ ತಕ್ಷಣ ಬಂಧನಕ್ಕೆ ಸೂಚನೆ- ಗೃಹ ಸಚಿವ ಡಾ. ಪರಮೇಶ್ವರ್
ಉಡುಪಿ: ಮಂಗಳೂರಿನ ಮಸಾಜ್ ಪಾರ್ಲರ್ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿ ದಾಳಿ ಮಾಡಿದವರನ್ನು ತಕ್ಷಣ ಬಂಧಿಸಿ ಕ್ರಮ ತೆಗೆದುಕೊಳ್ಳಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವ ಉದ್ದೇಶಕ್ಕೆ ಪಾರ್ಲರ್ ಮೇಲೆ ದಾಳಿಯಾಗಿದೆ ಎಂಬುದು ಮಾಹಿತಿ ಇಲ್ಲ. ಇಂತಹ ಕೃತ್ಯಗಳು ನಡೆಯಬಾರದು. ಕಾನೂನು ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ ಎಂದರು.
ಯಾರಿಗೂ ವ್ಯಾಪಾರ ಮಾಡಲು ಅಡ್ಡಿಪಡಿಸಬಾರದು. ಪ್ರತಿಯೊಬ್ಬರಿಗೂ ಕೆಲಸ ಮಾಡಿಕೊಳ್ಳುವ ಹಕ್ಕು ಇದೆ. ಆದುದರಿಂದ ಯಾರು ಕೂಡ ಕಾನೂನು ಕೈಗೆ ಎತ್ತಿಕೊಳ್ಳಬಾರದು. ದಾಳಿ ಮಾಡಿದವರು ಯಾರು ಎಂಬುದನ್ನು ಗುರುತಿಸುತ್ತೇವೆ. ಅವರ ವಿರುದ್ಧ ಏನು ಕ್ರಮ ತೆಗೆದುಕೊಳ್ಳಬೇಕು, ಅದನ್ನು ಇಲಾಖೆ ಮಾಡುತ್ತದೆ ಎಂದು ಅವರು ತಿಳಿಸಿದರು.
ಅನೈತಿಕವಾಗಿ ಕಾರ್ಯಾಚರಿಸುವ ಪಾರ್ಲರ್‌ಗಳಿದ್ದರೆ ಅವುಗಳ ಬಗ್ಗೆ ದೂರು ಕೊಡಲಿ. ದೂರು ಕೊಟ್ಟರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಅದು ಬಿಟ್ಟು ನಾವು ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ಈ ಪಾರ್ಲರ್‌ಗೆ ಮಹಾನಗರ ಪಾಲಿಕೆಯಿಂದ ಟ್ರೇಡ್ ಲೈಸೆನ್ಸ್ ನೀಡಲಾಗಿದೆ. ಯಾವ ಶರತ್ತು ಹಾಕಿ ಕೊಟ್ಟಿರುತ್ತಾರೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಒಂದು ವೇಳೆ ನಿಯಮಾವಳಿಗಳನ್ನು ಮೀರಿ ವ್ಯವಹರಿಸುತ್ತಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.