ಸುಗಮ ಸಂಚಾರಕ್ಕೆ ಪೂರಕ ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ನಗರಸಭೆ ಬದ್ಧ: ಪ್ರಭಾಕರ ಪೂಜಾರಿ
ಉಡುಪಿ: ನಗರದಲ್ಲಿ ವಾಹನ ದಟ್ಟಣೆಯನ್ನು ನಿಯಂತ್ರಿಸಿ ಸುಗಮ ಸಂಚಾರಕ್ಕೆ ಪೂರಕವಾಗಿ ನಗರದ ಪ್ರಮುಖ ಭಾಗಗಳಲ್ಲಿ ಪೊಲೀಸ್ ಇಲಾಖೆಯ ಮಾರ್ಗಸೂಚಿಯಂತೆ ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ನಗರಸಭೆ ಈಗಾಗಲೇ ಕ್ರಮ ಕೈಗೊಂಡಿದ್ದು,ಶೀಘ್ರದಲ್ಲೇ ವೈಜ್ಞಾನಿಕ ರೀತಿಯಲ್ಲಿ ಸಿಗ್ನಲ್ ಅಳವಡಿಕೆಗೆ ನಗರಸಭೆ ಬದ್ಧವಾಗಿದೆ ಎಂದು ಉಡುಪಿ ನಗರಸಭೆ ಅಧ್ಯಕ್ಷರಾದ ಪ್ರಭಾಕರ ಪೂಜಾರಿ ತಿಳಿಸಿದ್ದಾರೆ.
ಉಡುಪಿ ನಗರದ ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿದರಿಂದ ಸ್ಥಳೀಯರಿಗೆ ಉಂಟಾಗಿರುವ ಸಮಸ್ಯೆ ಬಗ್ಗೆ ಈಗಾಗಲೇ ಶಾಸಕ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಸ್ಥಳೀಯ ಮುಖಂಡರೊಂದಿಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಬ್ಯಾರಿಕೇಡ್ ತೆರವಿಗೆ ಮನವಿ ಮಾಡಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಮಾಹಿತಿ ನೀಡಿದ್ದೇವೆ.
ಈಗಾಗಲೇ ತೀರ ಅವೈಜ್ಞಾನಿಕ ರೀತಿಯಲ್ಲಿ ಟ್ರಾಫಿಕ್ ಸಿಗ್ನಲ್ ಕಂಬಗಳನ್ನು ರಸ್ತೆಯ ಬದಿಯಲ್ಲಿ ಹಾಕಿ ಪಾದಚಾರಿಗಳಿಗೆ, ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗುತ್ತಿದ್ದು, ಕೇವಲ ಜಾಹೀರಾತಿಗಾಗಿ ಟ್ರಾಫಿಕ್ ಸಿಗ್ನಲ್ ಮಾಡಿದಂತಿದೆ. ಕಲ್ಸಂಕ ಜಂಕ್ಷನ್ ನಲ್ಲಿ ಉಡುಪಿ ಸಿಟಿ ಬಸ್ ನಿಲ್ದಾಣ ಮತ್ತು ಮಣಿಪಾಲ ಭಾಗದ ರಸ್ತೆಗೆ ಮಾತ್ರ ಸಿಗ್ನಲ್ ಅಳವಡಿಕೆ ಮಾಡಿದ್ದು, ರಾಜಾಂಗಣ ಮತ್ತು ಅಂಬಾಗಿಲು ಗುಂಡಿಬೈಲು ರಸ್ತೆಗೆ ಸಿಗ್ನಲ್ ಅಳವಡಿಸಿಲ್ಲ.
ರಸ್ತೆ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ ಬೃಹತ್ ಗಾತ್ರದ ಟ್ರಾಫಿಕ್ ಕಂಬಗಳನ್ನು ಅಳವಡಿಸಿರುವ ಹಿನ್ನೆಲೆ ತ್ರಿವೇಣಿ ಸರ್ಕಲ್, ಡಯಾನ ಸರ್ಕಲ್ ಸಹಿತ ವಿವಿಧೆಡೆ ವಾಹನ ಸಂಚಾರಕ್ಕೆ ಕೃತಕ ತಡೆ ಸೃಷ್ಟಿಸಿದಂತಾಗಿದೆ. ಈ ಕಂಬಗಳನ್ನು ತೆರವು ಮಾಡುವ ಬಗ್ಗೆಯೂ ನಗರಸಭೆ ವತಿಯಿಂದ ಕ್ರಮ ವಹಿಸಲಾಗುವುದು.
ಈ ಹಿಂದೆ ಹಲವು ಬಾರಿ ನಗರದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಕೆ ಮಾಡಿದ್ದರೂ ಸೂಕ್ತ ನಿರ್ವಹಣೆ ಇಲ್ಲದೆ ತುಂಬಾ ಪರಿಣಾಮಕಾರಿಯಾಗಿ ಬಳಕೆಯಾಗದೆ ಯೋಜನೆ ಫಲಪ್ರದವಾಗದ ಹಿನ್ನೆಲ್ ಈ ಬಾರಿ ಪೊಲೀಸ್ ಇಲಾಖೆಯ ಮಾರ್ಗಸೂಚಿಯಂತೆ ವೈಜ್ಞಾನಿಕ ರೀತಿಯಲ್ಲಿ ಸಿಗ್ನಲ್ ಅಳವಡಿಕೆ ನಗರಸಭೆ ಮುಂದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.