ಉಡುಪಿ: ಕಲ್ಯಾಣ ಮಂಟಪದ ವ್ಯವಸ್ಥಾಪಕ ಕುಸಿದು ಬಿದ್ದು ಮೃತ್ಯು
ಉಡುಪಿ, ಜ.22(ಉಡುಪಿ ಟೈಮ್ಸ್ ವರದಿ): ಇಲ್ಲಿನ ಕಲ್ಯಾಣ ಮಂಟಪವೊಂದರ ವ್ಯವಸ್ಥಾಪಕರೊರ್ವರು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.
ನಗರದ ಕುಂಜಿಬೆಟ್ಟಿನ ಶಾರದಾ ಕಲ್ಯಾಣ ಮಂಟಪದ ವ್ಯವಸ್ಥಾಪಕ, ಬೈಲೂರು ಮಹಿಷಾಮರ್ಧಿನಿ ದೇವಸ್ಥಾನ ಬಳಿಯ ನಿವಾಸಿ ಅಜಿತ್ ರಾವ್(43) ಮೃತಪಟ್ಟವರು.
ಇವರು ಇಂದು ಸಂಜೆ ಕಲ್ಯಾಣ ಮಂಟಪದಲ್ಲಿ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಒಮ್ಮಿಂದೊಮ್ಮೆಲೆ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದರು. ತಕ್ಷಣ ಸ್ಥಳದಲ್ಲಿದ್ದವರು ಆಟೋ ರಿಕ್ಷಾದಲ್ಲಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಪರೀಕ್ಷಿಸಿದ ವೈದ್ಯರು ಅವರು ದಾರಿ ಮಧ್ಯೆ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ.
ಅಜಿತ್ ಅವರ ಪುತ್ರನಿಗೆ ಮೂರು ದಿನಗಳ ಹಿಂದೆಯಷ್ಟೆ ಉಪನಯನ ಶಾಸ್ತ್ರ ನಡೆದಿತ್ತೆಂದು ಅವರ ಆಪ್ತರು ತಿಳಿಸಿದ್ದಾರೆ.
ಮೃತರು ತಾಯಿ, ಪತ್ನಿ, ಓರ್ವ ಪುತ್ರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.