ನಾನು ಮತ್ತೆ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ- ಮಾಜಿ ಶಾಸಕ ರಘುಪತಿ ಭಟ್
ಉಡುಪಿ: ಮುಂದಿನ ವಿಧಾನಸಭೆಯಲ್ಲಿ ಉಡುಪಿ ಕ್ಷೇತ್ರದಿಂದ ಮತ್ತೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಮಾಜಿ ಶಾಸಕ ರಘುಪತಿ ಭಟ್ ಘೋಷಿಸಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯನ್ನು ಎದುರು ನೋಡುತ್ತಿರುವ ರಘುಪತಿ ಭಟ್ ಅವರು ಸ್ಪರ್ಧಿಸುವ ತಮ್ಮ ದೃಢ ನಿರ್ಧಾರವನ್ನು ವ್ಯಕ್ತಪಡಿಸಿ, “ನಾನು ಮತ್ತೊಮ್ಮೆ ವಿಧಾನಸಭೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ನಾನು ಬಿಜೆಪಿಯಿಂದ ಸ್ಪರ್ಧೆ ಮಾಡುತ್ತೇನೆಯೇ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಮಾಡುತ್ತೇನೆಯೇ ಎಂದು ನೋಡಬೇಕಾಗಿದೆ.
ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ಅವರು, ಪಕ್ಷವು ಆಹ್ವಾನ ನೀಡಿದರೆ ಬಿಜೆಪಿಗೆ ಮರು ಸೇರ್ಪಡೆಯಾಗಲು ಸಿದ್ದನಿದ್ದೇನೆ ಎಂದರು.
“ಬಿಜೆಪಿಗೆ ನನ್ನ ಸೇವೆ ಅಗತ್ಯವಿಲ್ಲ ಎಂದು ತೋರುತ್ತದೆ. ಆದರೇ 1999 ರಿಂದ ನನ್ನಿಂದಾಗಿ ಪಕ್ಷ ಬೆಳೆದಿದೆ. ಮಾತ್ರವಲ್ಲದೆ ನಾನೂ ಬೆಳೆದಿದ್ದೇನೆ. ಸದ್ಯ ಅವರು ನನ್ನನ್ನು ಆಹ್ವಾನಿಸಿಲ್ಲ. ಕಾಂಗ್ರೆಸ್ ಅಥವಾ ಇನ್ನಾವುದೇ ಪಕ್ಷ ಸೇರುವ ಬಗ್ಗೆ ನಾನು ಯಾವುದೇ ಚರ್ಚೆ ನಡೆಸಿಲ್ಲ. ಯಾವುದೇ ಕಾಂಗ್ರೆಸ್ ನಾಯಕರು ನನ್ನನ್ನು ಸಂಪರ್ಕಿಸಿಲ್ಲ, ನಾನೂ ಕೂಡ ಯಾರನ್ನೂ ಸಂಪರ್ಕಿಸಿಲ್ಲ. ನಾನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ನೋಂದಾಯಿಸಿದ್ದೇನೆ. ಆದರೆ ಸ್ಥಳೀಯ ಅಥವಾ ನಗರ ಸಮಿತಿಗಳು ನನ್ನ ಸದಸ್ಯತ್ವವನ್ನು ಅನುಮೋದಿಸುತ್ತದ ಎನ್ನುವುದು ತಿಳಿದಿಲ್ಲ ಎಂದರು.
ರಘುಪತಿ ಭಟ್ ಅವರು ತಮ್ಮ ಹಿಂದಿನ ಕ್ಷೇತ್ರದಲ್ಲಿ ಪ್ರಸ್ತುತ ನಾಯಕತ್ವದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ, ಅವರು ಪಕ್ಷಕ್ಕೆ ಕೊಡುಗೆ ನೀಡಿದರೂ ಅವರನ್ನು ಬದಿಗೆ ಸರಿಸಿದ್ದಾರೆ ಎಂದು ಆರೋಪಿಸಿದರು. “ನಾನು ಬೆಳೆಸಲು ಸಹಾಯ ಮಾಡಿದ ನಾಯಕ ನನ್ನ ವಿರುದ್ಧ ತಿರುಗಿಬಿದ್ದಿದ್ದರಿಂದ ನಾನು ತೀವ್ರ ನಿರಾಶೆಗೊಂಡಿದ್ದೇನೆ ಎಂದು ಹೇಳಿದರು.
ರಘುಪತಿ ಭಟ್ ಅವರು ಉಡುಪಿಯ ಜನರೊಂದಿಗಿನ ತಮ್ಮ ಸಂಪರ್ಕವನ್ನು ನೆನಪಿಸಿದರು. “ಉಡುಪಿಯ ಜನರು ನನ್ನನ್ನು ಚುನಾವಣೆಯಲ್ಲಿ ಸೋಲಿಸಲಿಲ್ಲ. ಉಡುಪಿ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಗೆದ್ದಿದ್ದೇನೆ. ಚುನಾವಣೆಗೆ ಇನ್ನೂ ಮೂರೂವರೆ ವರ್ಷಗಳು ಬಾಕಿ ಉಳಿದಿದ್ದು, ನಾನು ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೆ ಎಂಬುದನ್ನು ನಿರ್ಧರಿಸಲು ಸಾಕಷ್ಟು ಸಮಯಾವಕಾಶವಿದೆ ಎಂದರು.
ನನ್ನ ಅವಧಿಯ ಎಲ್ಲಾ ಯೋಜನೆಗಳ ಅನುಷ್ಠಾನಕ್ಕೆ ಶಾಸಕ ಯಶ್‌ಪಾಲ್ ಸುವರ್ಣ ತಡೆಯೊಡ್ಡುವ ಕೆಲಸ: ವಾಹನ ದಟ್ಟಣೆ ನಿಯಂತ್ರಣದ ಹೆಸರಿನಲ್ಲಿ ನಗರದ ಕಲ್ಸಂಕ ಜಂಕ್ಷನ್ ಮುಚ್ಚಿರುವುದು ಅವೈಜ್ಞಾನಿಕವಾಗಿದ್ದು, ಇದನ್ನು ತಕ್ಷಣವೇ ತೆರವು ಗೊಳಿಸಬೇಕು, ಈಗಾಗಲೇ ಟೆಂಡರ್ ಆಗಿರುವ ಟ್ರಾಫಿಕ್ ಸಿಗ್ನಲ್ ಅಳವಡಿಸುವ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಆದರೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಈ ಯೋಜನೆ ಅನುಷ್ಠಾನಕ್ಕೆ ತಡೆಯೊಡ್ಡುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ರಘುಪತಿ ಭಟ್ ಆರೋಪಿಸಿದ್ದಾರೆ.
ಈ ಯೋಜನೆಯ ಬಗ್ಗೆ ಶಾಸಕರಿಗೆ ಗುತ್ತಿಗೆದಾರರನ್ನು ಕರೆದುಕೊಂಡು ಹೋಗಿ ಮನವರಿಕೆ ಮಾಡಿಕೊಟ್ಟಿದ್ದೇನೆ. ಆದರೆ ಶಾಸಕರು ಗುತ್ತಿಗೆದಾರನಿಗೆ ಗದರಿಸಿ ಈ ಕಾಮಗಾರಿಯನ್ನು ನಿಲ್ಲಿಸಿದ್ದಾರೆ. ಈ ಯೋಜನೆಗೆ ನನ್ನ ಅವಧಿಯಲ್ಲಿ ಟೆಂಡರ್ ಆಗಿರುವ ಕಾರಣಕ್ಕಾಗಿಯೇ ಶಾಸಕರು ಈ ರೀತಿ ಮಾಡಿದ್ದಾರೆ ಎಂದು ದೂರಿದರು.
ಇಲ್ಲಿನ ವಾಹನ ದಟ್ಟಣೆ ಪರಿಹಾರಕ್ಕೆ ಪ್ಲೈಓವರ್ ನಿರ್ಮಿಸಿದರೆ ಕಲ್ಸಂಕ- ಮಣಿಪಾಲ ರಸ್ತೆಯ ವಾಣಿಜ್ಯ ವಹಿವಾಟುಗಳ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಒಂದು ವೇಳೆ ಪ್ಲೈಓವರ್ ನಿರ್ಮಿಸುವುದಾದರೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಹಾಗೂ ಚರ್ಚೆಗಳನ್ನು ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳ ಬೇಕು ಎಂದು ಅವರು ಸಂಸದರನ್ನು ವಿನಂತಿಸಿದರು.
ಟ್ರಾಫಿಕ್ ಒತ್ತಡ ಕಡಿಮೆ ಮಾಡಲು ಕಲ್ಸಂಕ ಜಂಕ್ಷನ್ ಹಾಗೂ ಬನ್ನಂಜೆ ಸರ್ಕಲ್‌ನಲ್ಲಿ ಸಿಗ್ನಲ್ ರಹಿತವಾಗಿ 70 ಮೀಟರ್ ಸುತ್ತಳತೆಯ ಸರ್ಕಲ್ ನಿರ್ಮಿಸಲು ನಾನು ಶಾಸಕನಾಗಿದ್ದಾಗ ಯೋಜನೆ ರೂಪಿಸಿ ಕೇಂದ್ರ ಸಚಿವರಿಗೆ ಮನವಿ ನೀಡಲಾಗಿತ್ತು. ಇದೀಗ ಈ ವೃತ್ತ ರಚನೆಯ ಪ್ರಸ್ತಾಪವನ್ನು ಕೇಂದ್ರ ಬಜೆಟ್‌ನಲ್ಲಿ ಸೇರ್ಪಡೆಗೊಳಿಸಲು ಸಂಸದರು ಪ್ರಯತ್ನಿಸಬೇಕು ಎಂದು ಅವರು ತಿಳಿಸಿದರು.
ನಗರ ಬೆಳೆದಂತೆ ವಾಹನ ಹಾಗೂ ಸಂಚಾರ ದಟ್ಟಣೆ ಆಗುವುದು ಸಹಜ. ಅದಕ್ಕೆ ರಸ್ತೆಗಳನ್ನು ಡಿವೈಡರ್ ಗಳನ್ನು ಮುಚ್ಚುವುದು ಶಾಶ್ವತ ಪರಿಹಾರ ಮಾರ್ಗ ಅಲ್ಲ. ರಸ್ತೆಗಳನ್ನು ಮುಚ್ಚುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತದೆ. ಆದುದರಿಂದ ಗುತ್ತಿಗೆದಾರರೊಂದಿಗೆ ಮಾತನಾಡಿ ಕಲ್ಸಂಕ ಜಂಕ್ಷನ್‌ನಲ್ಲಿ ಕೂಡಲೇ ಟ್ರಾಫಿಕ್ ಸಿಗ್ನಲ್ ಅಳವಡಿಸಬೇಕು. ಆ ಮೂಲಕ ಸಂಚಾರ ದಟ್ಟಣೆಯ ಒತ್ತಡವನ್ನು ಕಡಿಮೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.
ಉಡುಪಿ ನಗರಸಭೆ ನೂತಕ ಕಟ್ಟಡ ನಿರ್ಮಾಣಕ್ಕೆ ಕಂದಾಯ ಇಲಾಖೆ ನೀಡಿರುವ ಹಳೆ ತಾಲೂಕು ಕಚೇರಿ ಜಾಗದಲ್ಲಿರುವ ಜೈಲನ್ನು ಬೇರೆ ಕಡೆ ಸ್ಥಳಾಂತರಿಸ ಬೇಕು. ಆ ಮೂಲಕ ಅಲ್ಲಿನ ಪೂರ್ಣ ಜಾಗವನ್ನು ನಗರಸಭೆ ಕಟ್ಟಡ ನಿರ್ಮಿಸಲು ಅನುವು ಮಾಡಿಕೊಡ ಬೇಕು. ಅಲ್ಲದೆ ಅಲ್ಲೇ ಸಮೀಪ ಇರುವ ಉಪವಿಭಾಧಿಕಾರಿಗಳ ಕಚೇರಿ ಹಾಗೂ ನಿವಾಸಕ್ಕೆ ಕಾಯ್ದಿರಿಸಲಾಗಿರುವ ಅಂದಾಜು ಒಂದು ಎಕರೆ ಜಾಗವನ್ನು ನಗರಸಭೆಗೆ ಉಚಿತವಾಗಿ ನೀಡಬೇಕು ಎಂದು ಅವರು ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ನಗರಸಭೆ ಸದಸ್ಯ ಮಹೇಶ್ ಠಾಕೂರು ಉಪಸ್ಥಿತರಿದ್ದರು.