ಉಡುಪಿ: ಕಾವ್ಯ ಸಮಕಾಲೀನ ಬದುಕಿನ ಪ್ರತಿಬಿಂಬ- ಡಾ.ಚಾರಿ
ಉಡುಪಿ, ಜ.20: ಇಂದಿನ ಸಾಹಿತ್ಯದಲ್ಲಿ ಕವಿತೆ ಜಾಗೃತವಾಗಿದೆ ಮತ್ತು ಸಂವೇದನಾಶೀಲವಾಗಿದೆ. ಈ ಕಾವ್ಯ ಸಮಕಾಲೀನ ಬದುಕಿನ ಪ್ರತಿಬಿಂಬ ವಾಗಿದೆ. ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತದೆ. ಇಂದಿನ ಕೊಂಕಣಿ ಯುವಕವಿಗಳು ಈ ಪರಂಪರೆಯನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ದೆಹಲಿ ಸಾಹಿತ್ಯ ಅಕಾಡೆಮಿಯ ಜನರಲ್ ಕೌನ್ಸಿಲ್ ಸದಸ್ಯ ಡಾ. ಪೂರ್ಣಾನಂದ ಚಾರಿ ಹೇಳಿದ್ದಾರೆ.
ಕವಿತಾ ಟ್ರಸ್ಟ್ ಉಡುಪಿಯ ದಿ ಎಕ್ಸ್ ಪ್ರೆಶನ್ಸ್ ತಂಡದ ಸಹಕಾರದಲ್ಲಿ ಇತ್ತೀಚೆಗೆ ಸಾಸ್ತಾನದ ಆಶಿಯಾನ ಅಂಗಳದಲ್ಲಿ ನಡೆದ ಕವಿತಾ ಫೆಸ್ತ್- 2025 ಇದರ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು.
ಈ ಸಂದರ್ಭದಲ್ಲಿ ಮತಾಯಸ್ ಕುಟುಂಬ ಕವಿತಾ ಪುರಸ್ಕಾರವನ್ನು ಕೊಂಕಣಿ ನವಾಯತಿ ಕವಿ ಸಯ್ಯದ್ ಸಮೀವುಲ್ಲಾ ಬರ್ಮಾವರ್ ಅವರಿಗೆ ಪ್ರದಾನ ಮಾಡಲಾಯಿತು. ಸ್ಮಿತಪ್ರಜ್ಞ ಬರೆದ ಸ್ವರ್ಗಾಚಿ ಪಕ್ಷಿ ಕೊಂಕಣಿ ಕಾವ್ಯ ಸಂಗ್ರಹ ಲೋಕಾರ್ಪಣೆಗೊಳಿಸ ಲಾಯಿತು. ಸಾಸ್ತಾನ ಸಂತ ಆಂತೊನಿ ಇಗರ್ಜಿಯ ಧರ್ಮಗುರು ವಂ.ಸುನೀಲ್ ಡಿಸಿಲ್ವಾ ಹಾಗೂ ಕಾಣಕೋಣ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಡಾ.ರೂಪಾ ಚಾರಿ ಶುಭ ಹಾರೈಸಿದರು.
ಆಕರ್ಷಕ ಮೆರವಣಿಗೆಯೊಡನೆ ಕವಿತಾ ಫೆಸ್ತ್ ಇದರ 1 ನೇ ಆವೃತ್ತಿಯನ್ನು ಬಳ್ಳಾರಿ ಧರ್ಮ ಪ್ರಾಂತ್ಯದ ಬಿಷಪ್ ಹೆನ್ರಿ ಡಿಸೋಜ, ಉದ್ಯಮಿ ಜೊಸೆಫ್ ಎಲಿಯಾಸ್ ಮಿನೆಜಸ್, ದಿ ಎಕ್ಸ್‌ಪ್ರೆಶನ್ಸ್ ಅಧ್ಯಕ್ಷ ಪ್ರವೀಣ್ ಕರ್ವಾಲೊ, ಸುಜಾತ ಮತ್ತು ಆಲ್ವಿನ್ ಆಂದ್ರಾದೆ ದಂಪತಿ, ಕವಿತಾ ಟ್ರಸ್ಟ್ ಅಧ್ಯಕ್ಷ ಕಿಶೂ ಬಾರ್ಕೂರು ಮತ್ತು ಕಾರ್ಯದರ್ಶಿ ಎವ್ರೆಲ್ ರೊಡ್ರಿಗಸ್ ಹೂ ಪಕಳೆಗಳನ್ನು ಗಾಳಿಯಲ್ಲಿ ಹಾರಿಸುವ ಮೂಲಕ ವಿಭಿನ್ನವಾಗಿ ಉದ್ಘಾಟಿಸಿದರು.
ನನ್ನ ಜೀವನ:ನನ್ನ ಕಾವ್ಯ ಪ್ರಸ್ತುತಿಯಲ್ಲಿ ಡಾ.ರಾಜಯ್ ಪವಾರ್ ಹಾಗೂ ಕವಿ ಸಮೀವುಲ್ಲಾ ಬರ್ಮಾವರ್ ಅವರಿಂದ ಮಾತುಕತೆ ನಡೆಯಿತು. ಕವಿ ಮತ್ತು ವಾಚಕ ಸಂವಾದದಲ್ಲಿ ಗೋವಾದ ಅನ್ವೇಶಾ ಸಿಂಗ್ ಬಾಳ್ ಹಾಗೂ ಮಂಗಳೂರಿನ ಕವಯಿತ್ರಿ ಸ್ಮಿತಾ ಶೆಣೈ ಭಾಗವಹಿಸಿದರು.
ಆಂಡ್ರ್ಯೂ ಎಲ್ ಡಿಕುನ್ಹಾ ಅಧ್ಯಕ್ಷತೆಯಲ್ಲಿ ಅಂತರಾ ಭಿಡೆ, ವೆಂಕಟೇಶ್ ನಾಯಕ್, ಸುಪ್ರಿಯಾ ಕಾಣ್ ಕೋಣ್ಕರ್ ಮತ್ತು ಅಮೇಯ್ ನಾಯಕ್ ಕವಿತೆಗಳನ್ನು ವಾಚಿಸಿದರು. ಸಾಹಿತ್ಯ ಅಕಾಡೆಮಿ ಕೊಂಕ್ಣಿ ಸಲಹಾ ಸಮಿತಿಯ ನಿಮಂತ್ರಕ ಹಾಗೂ ಕವಿತಾ ಟ್ರಸ್ಟ್ ಸ್ಥಾಪಕ ಮೆಲ್ವಿನ್ ರೊಡ್ರಿಗಸ್ ಅಕಾಡೆಮಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಟ್ರಸ್ಟಿಗಳಾದ ವಿಲಿಯಮ್ ಪಾಯ್ಸ್ ಮತ್ತು ವಿಕ್ಟರ್ ಮತಾಯಸ್ ಸಹಕರಿಸಿದರು. ದಿ ಎಕ್ಸ್‌ಪ್ರೆಶನ್ಸ್ ಉಪಾಧ್ಯಕ್ಷೆ ಶ್ವೇತಾ ಪಿಂಟೊ ವಂದಿಸಿದರು. ಸ್ಟೀವನ್ ಲುವಿಸ್ ಮಟ್ಪಾಡಿ ಕಾರ್ಯಕ್ರಮ ನಿರೂಪಿಸಿದರು.