ಗಾಂಜಾ‌ ಮಾರಾಟ ಪ್ರಕರಣ- ಅಂಬಲಪಾಡಿಯ ಯುವಕನಿಗೆ ಶಿಕ್ಷೆ

ಉಡುಪಿ: ಎಂಟು ವರ್ಷದ ಹಿಂದೆ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಬಂಧಿತನಾಗಿದ್ದ ಆರೋಪಿಯನ್ನು ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ್.ಎಸ್. ಗಂಗಣ್ಣನವರ್ ದೋಷಿ ಎಂದು ಪರಿಗಣಿಸಿ 2 ವರ್ಷ 6 ತಿಂಗಳ ಕಠಿಣ ಸಜೆ ಮತ್ತು 20 ಸಾವಿರ ರೂ ದಂಡ ವಿಧಿಸಿ ಆದೇಶಿಸಿದ್ದಾರೆ.

ಅಂಬಲಪಾಡಿಯ ಅಖಿಲೇಶ್ ಶೆಟ್ಟಿ(25) ಶಿಕ್ಷೆಗೆ ಗುರಿಯಾದ ಆರೋಪಿ.

ಪ್ರಕರಣದ ವಿವರ: 2016ರ ಜು.5 ರಂದು ಉಡುಪಿಯ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸ್ ನಿರೀಕ್ಷಕ ರತ್ನಕುಮಾರ್.ಜಿ ಯವರು, ಕಡೆಕಾರು ಗ್ರಾಮದ ಕನ್ನರ್ಪಾಡಿ ದುರ್ಗಾಪರಮೇಶ್ವರಿ ಯುವಕ ಮಂಡಲದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ, ಜಿಲ್ಲಾ ಎಸ್ಪಿಯ ಅನುಮತಿ ಪಡೆದು, ಪತ್ರಾಂಕಿಕ ಅಧಿಕಾರಿಯಾದ ಉಡುಪಿ ತಹಶೀಲ್ದಾರ್ ಗುರುಪ್ರಸಾದ ಮತ್ತು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದರು.

ಈ ವೇಳೆ ಆರೋಪಿ ಅಖಿಲೇಶ್ ಪೊಲೀಸರನ್ನು ನೋಡಿ ಆತ ಓಡಲು ಪ್ರಯತ್ನಿಸಿದಾಗ ಆತನನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ, ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲದಲ್ಲಿ 1 ಕೆ.ಜಿ 150 ಗ್ರಾಂ ಗಾಂಜಾ ಪತ್ತೆಯಾಗಿತ್ತು. ತನಿಖೆಯಲ್ಲಿ ತಾನು ಗಾಂಜಾವನ್ನು ಉಪಯೋಗಿ ಸುತ್ತಿದ್ದು, ಉಡುಪಿ ಹಾಗೂ ಮಣಿಪಾಲದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಆರೋಪಿಯೂ ತಪ್ಪೊಪ್ಪಿಕೊಂಡಿದ್ದನು.

ಪೊಲೀಸ್ ನಿರೀಕ್ಷಕರಾದ ರತ್ನಕುಮಾರ್.ಜಿ ರವರು ಆರೋಪಿಯನ್ನು ಹಾಗೂ ಗಾಂಜಾವನ್ನು ವಶಪಡಿಸಿ ಕೊಂಡು ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರದಲ್ಲಿ ಪ್ರಕರಣವನ್ನು ಉಡುಪಿ ವೃತ್ತ ನಿರೀಕ್ಷಕ ಟಿ.ಆರ್ ಜಯಶಂಕರ್‌ರವರು ತನಿಖೆ ನಡೆಸಿ ಆರೋಪಿಯ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆ ಕಲಂ: 8(ಸಿ), 20(ಬಿ)(ii)(ಬಿ) ರಡಿಯಲ್ಲಿ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಜಯರಾಮ ಶೆಟ್ಟಿ ವಾದ ಮಂಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!