ಡಾ.ಅಶೋಕ್ ಉಡುಪಿ ಜಿಲ್ಲಾ ಸರ್ಜನ್ ನೇಮಕಾತಿ ರದ್ದು
ಉಡುಪಿ, ಜ.17: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಚ್.ಎಸ್. ಅಶೋಕ್ ಅವರನ್ನು ಉಡುಪಿ ಜಿಲ್ಲಾ ಶಸ್ತ್ರ ಚಿಕಿತ್ಸಕ (ಸರ್ಜನ್) ರಾಗಿ ವರ್ಗಾಯಿಸಿದ್ದು, ಈ ವರ್ಗಾವಣೆಯನ್ನು ಈ ಕೂಡಲೇ ಜಾರಿಗೆ ಬರುವಂತೆ ಇಲಾಖೆ ಸಕಾರದ ಅಧೀನ ಕಾರ್ಯದರ್ಶಿ ಶುಭಂ ಶುಕ್ಲ ರದ್ದುಪಡಿಸಿ ಆದೇಶ ನೀಡಿದ್ದಾರೆ.
ಉಡುಪಿ ಜಿಲ್ಲಾಸ್ಪತ್ರೆಯ ನೇತ್ರತಜ್ಞ ಡಾ.ನಿತ್ಯಾನಂದ ನಾಯಕ್ ಅವರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಪ್ರಭಾರ ಜಿಲ್ಲಾ ಶಸ್ತ್ರಚಿಕಿತ್ಸಕರಾಗಿ ನೇಮಕ ಮಾಡಿ ಆದೇಶಿಸಲಾಗಿದೆ. ಡಾ.ಎಚ್.ಎಸ್.ಅಶೋಕ್ ತಮ್ಮ ಪ್ರಭಾರವನ್ನು ಸಂಬಂಧಿಸಿದವರಿಗೆ ವಹಿಸಿ ಮುಂದಿನ ಸ್ಥಳ ನಿಯುಕ್ತಿಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರಲ್ಲಿ ಕಾರ್ಯವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಆಯುಕ್ತರು ಅಧಿಕಾರಿಯ ತಜ್ಞತೆ ಅನುಸಾರವಾಗಿ ಪ್ರಸ್ತುತ ಜಾರಿಯಲ್ಲಿರುವ ಕೌನ್ಸಿಲಿಂಗ್ ನಿಯಮಗಳ ನ್ನು ನಿಯಮಾನುಸಾರ ಸ್ಥಳ ನಿಯುಕ್ತಿಗೊಳಿಸಲು ಸೂಕ್ತ ಕ್ರಮವಹಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.