ಮಂಗಳೂರು: ಹಾಡಹಗಲೇ ಬಂದೂಕು ತೋರಿಸಿ ಬ್ಯಾಂಕ್‌ನ ಕೋಟ್ಯಾಂತರ ಮೌಲ್ಯದ ಚಿನ್ನಾಭರಣ-ನಗದು ದರೋಡೆ
ಉಳ್ಳಾಲ ತಾಲೂಕಿನ ಕೆಸಿ ರೋಡ್ನ ಕೋಟೆಕಾರು ಬ್ಯಾಂಕ್ಗೆ ನುಗ್ಗಿದ ಐವರು ಮುಸುಕುಧಾರಿಗಳು ಬಂದೂಕಿನಿಂದ ಬ್ಯಾಂಕ್ ಸಿಬ್ಬಂದಿ, ಅಧಿಕಾರಿಗಳನ್ನು ಬೆದರಿಸಿ ಚಿನ್ನಾಭರಣ, ನಗದು ದೋಚಿ ಕಳ್ಳರು ಪರಾರಿಯಾಗಿದ್ದಾರೆ.
ಫಿಯೆಟ್ ಕಾರಿನಲ್ಲಿ ಬಂದ ದರೋಡೆಕೋರರು ಬಂದೂಕು ತೋರಿಸಿ ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಹಕರನ್ನು ಬೆದರಿಸಿದ್ದಾರೆ. ಬ್ಯಾಂಕಿನಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಾರೆ. ಹಾಡಹಗಲೇ ಬ್ಯಾಂಕ್ಗೆ ನುಗ್ಗಿದ ಐವರು ದರೋಡೆಕೋರರು ಕೃತ್ಯ ಎಸಗಿದ್ದಾರೆ.
ಈ ತಂಡ ಮಂಗಳೂರು ಕಡೆಗೆ ಪರಾರಿಯಾಗಿದೆ ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪ್ರಕರಣದ ತನಿಖೆ ಆರಂಭಿಸಿದ್ದಾರೆ.ಈ ದುಷ್ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವ ಪ್ರಯತ್ನ ನಡೆಯುತ್ತಿದೆ.
ದರೋಡೆಕೋರರು ಬ್ಯಾಂಕಿನಲ್ಲಿದ್ದ ಮೂವರು ಮಹಿಳಾ ಸಿಬ್ಬಂದಿ ಹಾಗೂ ಓರ್ವ ಪುರುಷ ಸಿಬ್ಬಂದಿ ಮತ್ತೋರ್ವ ಸಿಸಿಟಿವಿ ದುರಸ್ತಿಗೆ ಬಂದಿದ್ದ ಟೆಕ್ನಿಷಿಯನ್ ಅವರಿಗೆ ಬಂದೂಕು ಹಾಗೂ ತಲವಾರು ತೋರಿಸಿ ಬೆದರಿಸಿದ್ದಾರೆ. ಬಳಿಕ ಬ್ಯಾಂಕ್ ಲಾಕರ್ ನಲ್ಲಿದ್ದ ಕೋಟ್ಯಂತರ ರೂ. ಮೌಲ್ಯದ ಚಿನ್ನ ಹಾಗೂ ಲಕ್ಷಾಂತರ ರೂ. ನಗದು ದೋಚಿ ಕಾರಿನಲ್ಲಿ ಪರಾರಿಯಾಗಿದ್ದಾರೆ.
ಬ್ಯಾಂಕ್ ಸಿಬ್ಬಂದಿಯ ಬೊಬ್ಬೆ ಕೇಳಿ ಬ್ಯಾಂಕ್ ಕೆಳಗಿನ ಬೇಕರಿಯಲ್ಲಿದ್ದ ವಿದ್ಯಾರ್ಥಿಗಳು ಮೊದಲ ಮಹಡಿಯಲ್ಲಿರುವ ಬ್ಯಾಂಕಿನತ್ತ ಓಡಿದ್ದಾರೆ. ಈ ವೇಳೆ ದರೋಡೆಕೋರರು ವಿದ್ಯಾರ್ಥಿಗಳನ್ನು ಬೆದರಿಸಿದ್ದಾರೆ. ಪ್ರತ್ಯಕ್ಷದರ್ಶಿ ವಿದ್ಯಾರ್ಥಿಗಳಲ್ಲಿ ಆಗಂತುಕರು ಕನ್ನಡದಲ್ಲಿ ಮಾತನಾಡಿದ್ದರೆ, ಬ್ಯಾಂಕ್ ಸಿಬ್ಬಂದಿ ಜೊತೆ ಹಿಂದಿ ಭಾಷೆಯಲ್ಲಿ ಸಂಭಾಷಣೆ ನಡೆಸಿದ್ದರು ಎಂದು ತಿಳಿದುಬಂದಿದೆ.
ಇಂದು ಬ್ಯಾಂಕಿನ ಸಿಸಿಟಿವಿ ಕ್ಯಾಮರಾ ದುರಸ್ತಿಗೆಂದು ತಂತ್ರಜ್ಞರೊಬ್ಬರು ಆಗಮಿಸಿದ್ದರು. ಸಿಸಿಟಿವಿ ತಂತ್ರಜ್ಞರ ಬೆರಳಿನಲ್ಲಿದ್ದ ಉಂಗುರವನ್ನುಕೂಡಾ ಬಲಾತ್ಕಾರವಾಗಿ ದೋಚಿರುವ ದರೋಡೆಕೋರರು ಬ್ಯಾಂಕ್ ಲಾಕರ್ ನಿಂದ ದೋಚಿದ ಚಿನ್ನ ಹಾಗೂ ನಗದನ್ನು ಗೋಣಿಯಲ್ಲಿ ತುಂಬಿಸಿ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.