ಇಂದ್ರಾಳಿ ಸೇತುವೆ ಒಂದು ತಿಂಗಳೊಳಗೆ ಪೂರ್ಣಗೊಳಿಸಲು ಸೂಚನೆ: ಸ್ಥಳಕ್ಕೆ ಡಿಸಿ, ಎಸ್ಪಿ ಭೇಟಿ ಪರಿಶೀಲನೆ
ಉಡುಪಿ, ಜ.15: ನಿಗದಿತ ಅವಧಿಯಲ್ಲಿ ಇನ್ನೂ ಪೂರ್ಣಗೊಳ್ಳದ ರಾಷ್ಟ್ರೀಯ ಹೆದ್ದಾರಿ 169 ಎ ಇದರ ಇಂದ್ರಾಳಿ ಸೇತುವೆ ಕಾಮಗಾರಿ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಏಳು ವರ್ಷಗಳ ಹಿಂದೆ ಆರಂಭಗೊಂಡ ಇಂದ್ರಾಳಿ ಸೇತುವೆ ಕಾಮಗಾರಿ, ತೀವ್ರ ಜನಾಕ್ರೋಶದ ಬಳಿಕ ಜ.15ರೊಳಗೆ ಪೂರ್ಣಗೊಳಿಸುವ ಕುರಿತು ಗುತ್ತಿಗೆದಾರರಿಂದ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆಸಿಕೊಳ್ಳಲಾಗಿತ್ತು. ಆದರೆ ಈ ಅವಧಿ ಇಂದಿಗೆ ಮುಗಿದಿದ್ದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಭೇಟಿ ನೀಡಿದ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು.
ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ, ಕಾಮಗಾರಿ ನಡೆಯುತ್ತಿದೆ. ಹೆಚ್ಚುವರಿ ಜೆಸಿಬಿ ನಿಯೋಜಿಸಿ ಕೆಲಸ ಮಾಡಲು ಸ್ಥಳದ ಕೊರತೆ ಇದೆ. ಅಲ್ಲದೆ ವಿದ್ಯುತ್‌ಲೈನ್, ಹೆದ್ದಾರಿಯಲ್ಲಿ ವಾಹನ ಸಂಚರಿಸುತ್ತಿರುವುದ ರಿಂದ ತುಂಬಾ ಸುರಕ್ಷತೆ ಹಾಗೂ ಜಾಗೃತೆಯಿಂದ ಕೆಲಸ ಮಾಡಬೇಕಾಗಿದೆ. ಇದರಿಂದ ತುಂಬಾ ವೇಗವಾಗಿ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ. ಆದರೂ ನಾವು ಒಂದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.
ಗರ್ಡರ್ ಜೋಡನೆ ಕಾರ್ಯ ಇನ್ನೂ 10 ದಿನಗಳು ಬಾಕಿ ಇದೆ. ಅದರ ಬಳಿಕ ಸೇತುವೆಯನ್ನು ಜೋಡಿಸ ಬೇಕಾಗಿದೆ. ಸೇತುವೆ ಅಳವಡಿಸುವ ಸಂದರ್ಭ ಒಂದು ದಿನ ರೈಲು ಸಂಚಾರ ಸ್ಥಗಿತಗೊಳಿಸಬೇಕಾಗುತ್ತದೆ ಮತ್ತು ಎಲೆಕ್ಟ್ರಿಸಿಟಿ ಲೈನ್ ಕೂಡ ಸ್ಥಗಿತಗೊಳಿಸ ಬೇಕಾಗುತ್ತದೆ. ಅದಕ್ಕೆ ರೈಲ್ವೆ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಅವರು ಹೇಳಿದರು.