ಕಾರ್ಕಳ: ಯಕ್ಷಗಾನ ಪ್ರದರ್ಶನ ನಿಲ್ಲಿಸಲು ಮುಂದಾದ ಪೊಲೀಸರು – ಅಭಿಮಾನಿಗಳ ಆಕ್ರೋಶ
ಕಾರ್ಕಳ: ಇಲ್ಲಿನ ಶಿರ್ಲಾಲಿನ ಜಾರ್ಕಳ ಮುಂಡ್ಲಿಯಲ್ಲಿ ನಡೆದ ಯಕ್ಷಗಾನ ಪ್ರದರ್ಶನವನ್ನು ಪೊಲೀಸರು ನಿಲ್ಲಿಸಲು ಮುಂದಾದ ಘಟನೆ ಕಳೆದ ರಾತ್ರಿ ನಡೆದಿದೆ. ಧ್ವನಿವರ್ಧಕಕ್ಕೆ ಅನುಮತಿ ಪಡೆಯದ ಕಾರಣ ಪ್ರದರ್ಶನವನ್ನು ನಿಲ್ಲಿಸುವಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸೂಚಿಸಿದ್ದು, ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಬಗ್ಗೆ ಆಯೋಜಕರು ಮಾತನಾಡಿ, ನಾವು ಪ್ರತಿ ವರ್ಷ ಈ ರೀತಿಯ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸುತ್ತೇವೆ. ಈ ಬಾರಿ ಮಾತ್ರ ಪೊಲೀಸರು ಅನಗತ್ಯ ತೊಂದರೆ ಕೊಟ್ಟಿದ್ದಾರೆ ಎಂದು ದೂರಿದ್ದಾರೆ. ಅಲ್ಲದೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಅವರು ಸಕಾಲಿಕವಾಗಿ ಅನುಮತಿ ನೀಡದ ಕಾರಣ ಈ ಸಮಸ್ಯೆ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.
ದೂರು ದಾಖಲು: ಗ್ರಾಮ ಪಂಚಾಯತ್‌ನಿಂದ ಹಾಗೂ ಪೊಲೀಸ್ ಇಲಾಖೆಯಿಂದ ಯಾವುದೇ ಪರವಾನಿಗೆಯನ್ನು ಪಡೆಯದ ಯಕ್ಷಗಾನ ಸಂಸ್ಥೆಯ ಅಧ್ಯಕ್ಷರಾದ ಸದಾನಂದ ಮತ್ತು ಅಜೆಕಾರು ಮಹಾಲಕ್ಷ್ಮೀ ಸೌಂಡ್ಸ್ ಮಾಲೀಕ ಅಪ್ಪು ಅವರ ಮೇಲೆ ಪ್ರಕರಣ ದಾಖಲಾಗಿದೆ.
ಪೊಲೀಸ್ ಇಲಾಖೆಯ ಸ್ಪಷ್ಟನೆ: ನಾವು ಕೇವಲ ನಿಯಮ ಪಾಲನೆ ಮಾಡುತ್ತಿದ್ದೇವೆ. ಧ್ವನಿವರ್ಧಕಕ್ಕೆ ಅನುಮತಿ ಇಲ್ಲದ ಕಾರಣ ಪ್ರದರ್ಶನವನ್ನು ನಿಲ್ಲಿಸುವಂತೆ ಸೂಚಿಸಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ. ಈ ಘಟನೆಯಿಂದ ಗ್ರಾಮದಲ್ಲಿ ತೀವ್ರ ಕೋಲಾಹಲ ಸೃಷ್ಟಿಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯ ವೈರಲ್ ಆಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಹಲವರು ಈ ಘಟನೆಯನ್ನು ಖಂಡಿಸಿದ್ದಾರೆ.