ಆನ್ ಲೈನ್ ಆರ್ಡರ್ ಮಾಡಿದರೆ ಮನೆ ಬಾಗಿಲಿಗೆ ಬರಲಿದೆ ತಾಜಾ ಮೀನುಗಳು…!
ಈಗಂತು ಎಲ್ಲಾನೂ ಆನ್‌ಲೈನ್‌ಮಯವಾಗಿ ಬಿಟ್ಟಿದೆ. ತರಕಾರಿ, ಬಟ್ಟೆ ಬರೆಗಳು ಏನೇ ಬೇಕಾದರೂ ನೀನು ಜಸ್ಟ್ ಆರ್ಡರ್ ಮಾಡಿದರೆ ಸಾಕು ಎಲ್ಲಾ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮನ್ನು ಸೇರುತ್ತವೆ. ಇದೀಗ ಈ ಸಾಲಿಗೆ ಸದ್ಯದಲ್ಲೇ ಮತ್ತೊಂದು ಆನ್‌ಲೈನ್ ಸೇವೆ ಆರಂಭವಾಗಲಿದೆ.
ಹೌದು…, ಇನ್ನು ಮುಂದೆ ನೀವು ತಾಜಾ ಮೀನು ಖರೀದಿಸಲು ಮಾರುಕಟ್ಟೆಗೆ ಹೋಗಬೇಕಾಗಿಲ್ಲ, ಆನ್ ಲೈನ್ ಮೂಲಕ ಆರ್ಡರ್ ಮಾಡಿದರೆ ಸಾಕು ಮನೆ ಬಾಗಿಲಿಗೆ ತಾಜಾ ಮೀನು ತಲುಪಿಸುವ ಆ್ಯಪ್ ಅನ್ನು ಮೀನುಗಾರಿಕೆ ಇಲಾಖೆ ಸಿದ್ದಪಡಿಸಿದೆಯಂತೆ.
ಈ ಬಗ್ಗೆ ಮಾಹಿತಿ ನೀಡಿರುವ ಬಂದರು ಮತ್ತು ಮೀನುಗಾರಿಕೆ ಹಾಗೂ ಒಳನಾಡು ಸಾರಿಗೆ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಆನ್ ಲೈನ್ ಮುಖಾಂತರ ಆರ್ಡರ್ ಮಾಡಿದರೆ ಮನೆ ಬಾಗಿಲಿಗೆ ಮೀನು ತಂದುಕೊಡುವ ಯೋಜನೆ ರೂಪಿಸಲಾಗುತ್ತಿದೆ. ಈಗಾಗಲೇ ಈ ಕುರಿತಂತೆ ಅ್ಯಪ್ ಸಿದ್ದ ಪಡಿಸಲಾಗುತ್ತಿದ್ದು, ನವೆಂಬರ್ 20 ರಂದು ಮತ್ಸ್ಯ ಸಂಪದ ಕಾರ್ಯಗಾರದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಈ ಆ್ಯಪ್‌ಗೆ ಚಾಲನೆ ನೀಡಲಿದ್ದಾರೆ ಎಂದು ಅವರು ಹೇಳಿದರು.
ಹೆಸರುಘಟ್ಟದಲ್ಲಿರುವ ಮೀನುಗಾರಿಕೆ ಸಾಕಾಣಿಕೆ ಕೇಂದ್ರದಲ್ಲಿ ವಿದೇಶದ ಬಣ್ಣದ ಮೀನು ಸಾಕಾಣಿಕೆ ಮಾಡಲು ಒಂದು ಕೋಟಿ ರೂ. ವೆಚ್ಚದಲ್ಲಿ ಮೀನು ಕ್ವಾರೈಂಟೈನ್ ಕೇಂದ್ರ ಸ್ಥಾಪಿಸಲಾಗಿದೆ. ಚೆನೈನಲ್ಲಿ ಮಾತ್ರ ಇದ್ದಂತಹ ಈ ವ್ಯವಸ್ಥೆ ಈಗ ನಮ್ಮ ರಾಜ್ಯಕ್ಕೂ ವಿಸ್ತರಣೆಯಾಗಿದ್ದು ಈ ವ್ಯವಸ್ಥೆ ಮೂಲಕ ವಿದೇಶದಿಂದ ಆಮದು ಮಾಡಿದ ಮೀನನ್ನು ಒಂದು ವಾರ ಪ್ರತ್ಯೇಕವಾಗಿಟ್ಟು ರೋಗ ಮುಕ್ತವೆಂದು ನಿರ್ಧರಿಸಿದ ಬಳಿಕ ಸಾಕಾಣಿಕೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.