ಉಡುಪಿ: ಎಂಡಿಎಂಎ ಪೌಡರ್ ಮಾರಾಟಕ್ಕೆ ಯತ್ನ- ಐವರ ಬಂಧನ
ಉಡುಪಿ, ಜ.13: ನಿಷೇದಿತ ಮಾದಕ ವಸ್ತು ಎಂಡಿಎಂಎ ಪೌಡರ್ ಮಾರಾಟಕ್ಕೆ ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಉಡುಪಿ ಸೆನ್ ಪೊಲೀಸರು ಮರವಂತೆ ಬೀಚ್ ಸಮೀಪ ಜ.12ರಂದು ಸಂಜೆ ವೇಳೆ ಬಂಧಿಸಿದ್ದಾರೆ.
ಅಬ್ರಾರ್ ಶೇಖ್, ಇಸ್ಮಾಯಿಲ್ ಫರ್ಹಾನ್, ಜಿಯಾಮ್ ಬೆಳ್ಳಿ, ನೌಮನ್ ಸಜ್ಜಾದ್, ಮುಸ್ತಕೀಮ್ ಕೆವಾಕ ಬಂಧಿತ ಆರೋಪಿಗಳು. ಇವರಿಂದ 78,000ರೂ. ಮೌಲ್ಯದ 15 ಗ್ರಾಂ 59 ಮಿಲಿ ಗ್ರಾಂ ತೂಕದ ಎಂಡಿಎಂಎ ಪೌಡರ್, 50ಸಾವಿರ ರೂ. ಮೌಲ್ಯದ ಐದು ಮೊಬೈಲ್ ಪೋನ್ ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 11,28,000ರೂ. ಎಂದು ಅಂದಾಜಿಸಲಾಗಿದೆ.
ಆರೋಪಿ ಅಬ್ರಾರ್ ಶೇಖ್ ಎಂಡಿಎಂಎ ಪೌಡರ್‌ನ್ನು ಬೆಂಗಳೂರಿನ ದಾವೂದ್ ಮತ್ತು ಇಸಾಕ್ ಅವರಿಂದ ಖರೀದಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.