ವಾರಾಹಿಯಿಂದ ನಿರ್ಮಾಣಗೊಂಡಿರುವ ರಸ್ತೆ ಕಾಮಗಾರಿಯಲ್ಲಿ ಅವ್ಯವಹಾರ: ಲೋಕಾಯುಕ್ತದಿಂದ ತನಿಖೆಗೆ ನಿರ್ಧಾರ

ಉಡುಪಿ: ಪ್ರಸ್ತುತ ಉಡುಪಿಯಲ್ಲಿರುವ ಜಿಲ್ಲಾಸ್ಪತ್ರೆಯನ್ನು 250 ಹಾಸಿಗೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಿ, ಇತರೆ ಮೂಲಭೂತ ಸೌಕರ್ಯಗಳೊಂದಿಗೆ 115 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿಗೊಳ್ಳಲು ಈಗಾಗಲೇ ಅನುಮೋದನೆ ದೊರೆತಿದ್ದು, ನೂತನ ಜಿಲ್ಲಾ ಆಸ್ಪತ್ರೆ ಕಟ್ಟಡ ಪೂಣಗೊಳ್ಳುವವರೆಗೆ, ಈಗಿರುವ ಜಿಲ್ಲಾಸ್ಪತ್ರೆಯನ್ನು ಪೂರ್ಣ ಪ್ರಮಾಣದಲ್ಲಿ ಬ್ರಹ್ಮಾವರಕ್ಕೆ ಸ್ಥಳಾಂತರಿಸುವ ಕುರಿತಂತೆ , ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ , ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಯಿತು.

ನೂತನ ಜಿಲ್ಲಾಸ್ಪತ್ರೆ ಕಟ್ಟಡ ಕಾಮಗಾರಿಯು 2021 ರ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಆರಂಭಗೊಳ್ಳಲಿದ್ದು, ನೂತನ ಕಟ್ಟಡ ಕಾಮಗಾರಿಯ ಸಂದರ್ಭದಲ್ಲಿ ರೋಗಿಗಳನ್ನು ಹಾಗೂ ಸಂಪೂರ್ಣ ಉಪಕರಣಗಳನ್ನು ಸ್ಥಳಾಂತರಿಸುವುದು ಅಗತ್ಯವಿದ್ದು, ಅದಕ್ಕಾಗಿ ಹೊಸ ಕಟ್ಟಡ ಪೂರ್ಣಗೊಳ್ಳುವರೆಗೆ ತಾತ್ಕಾಲಿಕವಾಗಿ ಬ್ರಹ್ಮಾವರಕ್ಕೆ ಸ್ಥಳಾಂತರಿಸುವುದು ಅಗತ್ಯವಿದೆ ಎಂದು ಶಾಸಕ ರಘುಪತಿ ಭಟ್ ಮತ್ತು ಎಲ್ಲಾ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು, ಈ ಕುರಿತಂತೆ ಬ್ರಹ್ಮಾವರದಲ್ಲಿ ಸ್ಥಳ ಪರಿಶೀಲನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.
ಕೊಕ್ಕರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟಂಬೈಲು ಪ್ರದೇಶದಲ್ಲಿ ವಾರಾಹಿ ನಿಗಮದಿಂದ ನಿರ್ಮಾಣಗೊಂಡಿರುವ ರಸ್ತೆ ಕಾಮಗಾರಿಯಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದು, ಕಳಪೆ ಕಾಮಗಾರಿಯಾಗಿದ್ದು, ಕಾಮಗಾರಿಗೆ 2 ಕೋಟಿ ರೂ ಪಾವತಿಯಾಗಿದ್ದು, ಈ ಕುರಿತು ಲೋಕಾಯುಕ್ತದಿಂದ ತನಿಖೆ ನಡೆಸುವಂತೆ ಸದಸ್ಯ ಜನಾರ್ಧನ ತೋನ್ಸೆ ಆಗ್ರಹಿಸಿದರು, ಈ ಕುರಿತಂತೆ ಪತ್ರ ಬರೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.

ಲಾಕ್‌ಡೌನ್ ಅವಧಿಯಲ್ಲಿ ಬೈಂದೂರು ವ್ಯಾಪ್ತಿಯಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಅಕ್ಕಿ ಮತ್ತು ಬೇಳೆಯನ್ನು ವಿತರಿಸಿರುವಲ್ಲಿ ಅವ್ಯವಹಾರ ನಡೆದಿದೆ, ಈ ಬಗ್ಗೆ ನೀಡಲಾಗಿರುವ ಸಂಬಂದಪಟ್ಟ ಇಲಾಖೆ ನೀಡಿರುವ ದಾಖಲೆಗಳು ಸಹ ಸಮರ್ಪಕವಾಗಿಲ್ಲ ಮತ್ತು ಶಿಕ್ಷಕರ ನಿಯೋಜನೆಯಲ್ಲಿ ನಿಯಮ ಮೀರಿ ಮಾಡಲಾಗಿದೆ ಈ ಎರಡೂ ಪ್ರಕರಣಗಳ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸದಸ್ಯರಾದ ಶಂಕರ್ ಪೂಜಾರಿ ಮತ್ತು ಬಾಬು ಶೆಟ್ಟಿ ಒತ್ತಾಯಿಸಿದರು.

ಈ ಬಗ್ಗೆ 10 ದಿನದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸಿಇಓ ಡಾ. ನವೀನ್ ಭಟ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬ್ರಹ್ಮಾವರದಲ್ಲಿ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗಿರುವ ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಖೆಗೆ ಸೂಚಿಸಿದ ಶಾಸಕ ರಘುಪತಿಭಟ್, ಡಿಎಫ್‌ಓ ಅವರು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಜಿಲ್ಲೆಯ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಹೆಚ್ಚಿನ ದರದಲ್ಲಿ ಬಾಡಿಗೆ ವಸೂಲಿ ಮಾಡುತ್ತಿದ್ದು, ಇದರಿಂದ ರೈತರಿಗೆ ನಷ್ಠವಾಗುತ್ತಿದೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿದರು, ಸದ್ರಿ ಸಂಸ್ಥೆಯ ಅದಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು ಮತ್ತು ರೈತರೊಂದಿಗೆ ಸಭೆ ನಡೆಸಿ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಇಓ ಡಾ. ನವೀನ್ ಭಟ್ ತಿಳಿಸಿದರು.

ನೆರೆಯಿಂದ ಹಾನಿಯಾದವರಿಗೆ 10,000 ರೂ. ಪರಿಹಾರ ನೀಡಿದ್ದು ಬಿಟ್ಟರೆ ಹೆಚ್ಚಿನ ಪರಿಹರ ವಿತರಣೆಯಾಗಿಲ್ಲ ಎಂದು ಸದಸ್ಯೆ ಚಂದ್ರಿಕಾ ಕೇಲ್ಕರ್ ಸಭೆಯ ಗಮನಕ್ಕೆ ತಂದರು, ಪ್ರಸ್ತುತ ತಾತ್ಕಾಲಿಕ ಪರಿಹಾರ ಮಾತ್ರ ನೀಡಿದ್ದು, ನಷ್ಠದ ವರದಿ ಆಧರಿಸಿ ಪರಿಹಾರವನ್ನು ವಿತರಿಸಲಾಗುವುದು, ನೆರೆ ಹಾನಿ ಕುರಿತು ಪರಿಹಾರಕ್ಕೆ ಅರ್ಜಿ ಸಲ್ಲಿಸದೇ ಬಾಕಿ ಇರುವವರು ನವೆಂಬರ್ 30 ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುರಿತಂತೆ ಗೀತಾಂಜಲಿ ಸುವರ್ಣ, ಶಶಿಕಾಂತ ಪಡುಬಿದ್ರೆ, ಬಾಬು ಶೆಟ್ಟಿ , ಯಾವಾಗ ಕಾಮಗಾರಿ ಸಂಪೂರ್ಣಗೊಳ್ಳುತ್ತದೆ ಎಂದು ಸೂಕ್ತ ಉತ್ತರ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದರು, ಪಡುಬಿದ್ರೆಯ ರಸ್ತೆಯನ್ನು ಮಾರ್ಚ್ ಮೊದಲ ವಾರದಲ್ಲಿ ಸಂಪೂರ್ಣ ಮುಕ್ತಾಯಗೊಳಿಸಲಿದ್ದು, ಮಾಚ್ ಅಂತ್ಯದ ವೇಳೆಗೆ ಕುಂದಾಪುರ ರಸ್ತೆಯನ್ನು ಪೂರ್ಣಗೊಳಿಸಲಾಗುವುದು, ಸರ್ವಿಸ್ ರಸ್ತೆ ಕಾಮಗಾರಿಗಳನ್ನು ಸಹ ಮುಕ್ತಾಯಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಕರಾವಳಿ ಜಂಕ್ಷನ್ ಬಳಿಯ ಮೇಲು ಸೇತುವೆಯ ಮೇಲೆ ಲೈಟ್ ಕಂಬಗಳನ್ನು ಅಳವಡಿಸುವಂತೆ ರಘುಪತಿ ಭಟ್ ಸೂಚಿಸಿದರು.

ಕೃಷಿ ಇಲಾಖೆಯಿಂದ ರೈತರಿಗೆ ಸಿಗುವ ಟಾರ್ಪಲ್ ಕಳಪೆ ಗುಣಮಟ್ಟದ್ದಾಗಿದ್ದು, ಈ ಕುರಿತಂತೆ ರೈತರಿಗೆ ಗುಣಮಟ್ಟದ ಟಾರ್ಪಲ್ ಸಿಗುವಂತಾಗಬೇಕು ಎಂದು ಸದಸ್ಯ ಉದಯ ಕೋಟ್ಯಾನ್ ಹೇಳಿದರು. ಈ ಕುರಿತು ಸರಕಾರಕ್ಕೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಕೃಷಿ ಇಲಾಖೆ ಅಧಿಕಾರಿಗೆ ಅಧ್ಯಕ್ಷರು ತಿಳಿಸಿದರು. ಎಂಡೋಸಲ್ಫಾನ್ ಪೀಡಿತರಿಗೆ ಸಿಗುವ ಪಿಂಚಣಿ ಹಣ, ವಿಧವಾ ವೇತನ, ವೃದ್ಧಾಪ್ಯ ವೇತನದ ಪಾವತಿಯು ವಿಳಂಬವಾಗುತ್ತಿದ್ದು, ಅದನ್ನು ಸಮಯಕ್ಕೆ ಸರಿಯಾಗಿ ದೊರಕುವಂತೆ ಮಾಡಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅಧ್ಯಕ್ಷರು ತಿಳಿಸಿದರು.

2007-08 ರಲ್ಲಿ30 ಲಕ್ಷದ ಅನುದಾನ ಆರಂಭಗೊಂಡ ಕೆಮ್ಮಣ್ಣು ಪಿಯು ಕಾಲೇಜು ಕಟ್ಟಡದ ಕಾಮಗಾರಿ ಇದುವರೆಗೆ ಪೂರ್ಣಗೊಂಡಿಲ್ಲ ಎಂದು ಸದಸ್ಯ ಜನಾರ್ಧನ ತೋನ್ಸೆ ಆಕ್ಷೇಪ ವ್ಯಕ್ತಪಡಿಸಿದರು. ಕಟ್ಟಡವನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ, ಸಂಬಂದಪಟ್ಟ ಇಲಾಖೆಗೆ ಹಸ್ತಾಂತರಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಅಧ್ಯಕ್ಷರು ಸೂಚಿಸಿದರು.

ಪಡುವರಿ ಪಟ್ಟಣ ಪಂಚಾಯತ್ ನಲ್ಲಿ ಪಡಿತರ ವಿತರಣೆಗೆ ಆಗಿರುವ ಸಮಸ್ಯೆಯನ್ನು ಇತ್ಯರ್ಥಪಡಿಸುವಂತೆ ಸದಸ್ಯ ಬಟವಾಡೆ ಸುರೇಶ್ ಆಗ್ರಹಿಸಿದರು, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲು ನಗರಾಭಿವೃಧ್ದಿ ಕೋಶದ ಅಧಿಕಾರಿಗಳಿಗೆ ಅಧ್ಯಕ್ಷರು ಸೂಚಿಸಿದರು.ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಜಿ ಪುತ್ರನ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಮೀತ್ ಶೆಟ್ಟಿ ಕೌಡೂರು, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ, ಕುಂದಾಪುರ ಡಿಎಫ್‌ಓ ಆಶೀಶ್ ರೆಡ್ಡಿ, ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!