ಕೋಟ: ರಸ್ತೆ ಬದಿ ನಿಂತಿದ್ದ ಲಾರಿ ಚಾಲಕನಿಗೆ ಡಿಕ್ಕಿ ಹೊಡೆದ ಪಿಕಪ್ ವಾಹನ: ಚಾಲಕ ಮೃತ್ಯು…!
ಕೋಟ: ಊಟಕ್ಕೆ ಹೋಗಲು ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿ ಚಾಲಕನಿಗೆ ಅತೀವೇಗವಾಗಿ ಬಂದ ಮಹೀಂದ್ರ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡಿದ್ದ ಲಾರಿ ಚಾಲಕ ಮೃತಪಟ್ಟ ಘಟನೆ ಕುಂದಾಪುರ-ಉಡುಪಿ ರಾ.ಹೆ. 66 ರ ತೆಕ್ಕಟ್ಟೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಮೃತ ವ್ಯಕ್ತಿಯನ್ನು ಲಾರಿ ಚಾಲಕ ವೀರಣ್ಣ ಸಕ್ರಿ ಎಂದು ಗುರುತಿಸಲಾಗಿದೆ. ಲಾರಿ ಚಾಲಕ ವೀರಣ್ಣ ಸಕ್ರಿ ಹಾಗೂ ಕ್ಲೀನರ್ ದತ್ತಾತ್ರೇಯ ಶೆಡ್ ಬಾಳ್ಕರ್ ಲಾರಿಯಲ್ಲಿ ಮಂಗಳೂರಿನ ಕಡೆಗೆ ಸಾಗುತ್ತಿದ್ದು, ಈ ವೇಳೆ ತೆಕ್ಕಟ್ಟೆ ಬಳಿ ಹೋಟೆಲ್ ಒಂದರ ಎದುರಿನಲ್ಲಿ ಲಾರಿಯನ್ನು ನಿಲ್ಲಿಸಿದ್ದಾರೆ. ಬಳಿಕ ಊಟಕ್ಕೆ ಹೋಗುವ ಸಲುವಾಗಿ ಅಲ್ಲೇ ರಸ್ತೆ ಬದಿಯಲ್ಲಿ ನಿಂತಿದ್ದರು. ಈ ವೇಳೆ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಅತೀವೇಗವಾಗಿ ಸಾಗುತ್ತಿದ್ದ ಮಹೀಂದ್ರ ಪಿಕಪ್ ವಾಹನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಗೆ ಬಂದಿದ್ದು, ರಸ್ತೆ ಬದಿ ನಿಂತಿದ್ದ ವೀರಣ್ಣ ಸಕ್ರಿ ಎಂಬುವವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವೀರಣ್ಣ ಸಕ್ರಿ ತಲೆಗೆ, ಕೈ ಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲೇ ಗಾಯಾಳು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮಹೀಂದ್ರ ಪಿಕಪ್ ವಾಹನ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣವಾಗಿದ್ದು, ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.