ಕೋಟ: ಶೀಘ್ರದಲ್ಲೇ ಮೂರ್ತೆದಾರರ ಸಭೆ ಕರೆದು ಸಮಸ್ಯೆಗಳ ಬಗ್ಗೆ ಚರ್ಚೆ- ಸಚಿವ ರಾಜಣ್ಣ

Oplus_131072

ಕೋಟ, ಜ.13: ಶೋಷಣೆಯ ವಿರುದ್ಧ ಹಾಗೂ ಜನಪರ ಕಾಳಜಿಗೆ ಹೋರಾಟ ಮೂಲಕ ಉತ್ತರ ಸಿಗಲು ಸಾಧ್ಯ. ಮೂರ್ತೆದಾರರ ಸಂಘಗಳ ಸಭೆಯನ್ನು ಆದಷ್ಟು ಶೀಘ್ರದಲ್ಲೇ ಬೆಂಗಳೂರಿನಲ್ಲಿ ಸಭೆ ಕರೆದು ಏಳು ಬಿಳಿನ ಕುರಿತು ಚರ್ಚೆ ನಡೆಸಲಾಗುವುದು ಎಂದು ರಾಜ್ಯ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.

ಕೋಟದ ಮೂರ್ತೆದಾರರ ಸಹಕಾರಿ ಸಂಘದ 34ನೇ ವರ್ಷಾಚರಣೆ ಹಾಗೂ ಸಂಘದ ಕೇಂದ್ರ ಕಛೇರಿಯ ಕಟ್ಟಡ ಲೋಕಾರ್ಪಣೆ, ದಿ.ಬಂಗಾರಪ್ಪ ಸಭಾಭವನ ವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಯುವ ಸಮುದಾಯ ಈ ಸಮಾಜದ ಆಸ್ತಿ.ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯೆಗೆ ಮೊದಲ ಪ್ರಾಶಸ್ತ್ಯ ಇದ್ದು ಕುಲ ಕಸುಬು ಎಂಬುವುದನ್ನು ಬದಿಗೊತ್ತಿ ನಿಮ್ಮ ಮಕ್ಕಳನ್ನು ವಿದ್ಯೆಯ ಮೂಲಕ ಈ ಸಮಾಜದ ಉನ್ನತ ಹುದ್ದೆಗೆರಲು ಅವಕಾಶ ಕಲ್ಪಿಸಬೇಕು. ಈ ಎಲ್ಲಾ ಹೊಣೆಗಾರಿಕೆಯಿಂದ ಪೋಷಕರು ನಿರಾಸಕ್ತಿ ತೋರ ಬಾರದು ಎಂದರು.

ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಅತಿ ಹಿಂದುಳಿದ ಸಮಾಜ ಇಂದು ಸಹಕಾರಿ ಕ್ಷೇತ್ರದ ಮೂಲಕ ಸ್ವಾವಲಂಬಿಯಾಗಿ ಮುಂಚೂಣಿಗೆ ನಿಲ್ಲುತ್ತದೆ. ಇದಕ್ಕೆ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಶಕ್ತಿಯಾಗಿ ನಿಂತ ಸಂಘಗಳೇ ಸಾಕ್ಷಿ. ಸಂಘಗಳು ಹುಟ್ಟು ಹಾಕುದು ಸುಲಭ, ಆದರೆ ಅದನ್ನು ಸದೃಢ ಶಕ್ತಿಯಾಗಿ ಬೆಳೆಸುವುದು ಕಷ್ಟಕರ ಎಂದು ಅವರು ತಿಳಿಸಿದರು.

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮುಖ್ಯಸ್ಥ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿದರು. ಅಧ್ಯಕ್ಷತೆಯನ್ನು ಕೋಟ ಮೂರ್ತೆ ದಾರರ ಸಂಘದ ಅಧ್ಯಕ್ಷ ಕೆ.ಕೊರಗ ಪೂಜಾರಿ ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವರಾದ ವಿನಕುಮಾರ್ ಸೊರಕೆ, ಕೆ.ಜಯಪ್ರಕಾಶ ಹೆಗ್ಡೆ, ಜಿಲ್ಲಾ ಸಹಕಾರಿ ಯೂನಿಯನ್ ಬ್ಯಾಂಕ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ, ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಕನ್ಯಾ ಜಗದೀಶ್, ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್, ಕೋಟ ಅಮೃತೇಶ್ವರಿ ದೇಗುಲದ ಅಧ್ಯಕ್ಷ ಆನಂದ್ ಸಿ.ಕುಂದರ್ ಕೋಟ ಗ್ರಾಪಂ ಅಧ್ಯಕ್ಷೆ ಜ್ಯೋತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಜಗದೀಶ್ ಕೆಮ್ಮಣ್ಣು ಸ್ವಾಗತಿಸಿದರು. ಕೃಷ್ಣ ಪೂಜಾರಿ ವಂದಿಸಿದರು. ನರೇಂದ್ರ ಕುಮಾರ್ ಕೋಟ ಹಾಗೂ ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!