113 ಜನ ಶಾಸಕರು ಬೇಕು, ಸರ್ಕಾರ ಮಾಡ್ಲಿಕ್ಕೆ.. ಅದು ಅವರ ಗಮನದಲ್ಲೂ ಇದೆ- ಡಿಕೆಶಿ ಹೇಳಿಕೆಗೆ ನಾನು ಕಮೆಂಟ್ ಮಾಡಲ್ಲ- ಕೆ. ಎನ್ ರಾಜಣ್ಣ
ಉಡುಪಿ: ನಾನು ಕೆಪಿಸಿಸಿ ಅಧ್ಯಕ್ಷ ಹುದ್ದೆ ಬೇಕು ಅಂತ ಕೇಳಿಲ್ಲ. ಕೊಟ್ಟರೆ ತಗೊಳ್ತೇನೆ ಎಂದು ಹೇಳಿದ್ದೇನೆ. ನನಗೆ ಅಧ್ಯಕ್ಷಗಿರಿ ಕೊಡ್ತೇನೆ ಅಂದ್ರೆ ಆಗಲಿಕ್ಕೆ ಸಿದ್ದ ಇದ್ದೇನೆ. ಮಂತ್ರಿ ಕೆಲಸ ಬಿಡಲು ಸಿದ್ದ ಇದ್ದೇನೆ. ಎಲ್ಲೂ ಅರ್ಜಿ ಹಾಕೊಂಡು ಕೇಳುವ ಪ್ರಮೇಯ ಇಲ್ಲ ಎಂದು ಸಹಕಾರಿ ಸಚಿವ ಕೆ ಎನ್ ರಾಜಣ್ಣ ಹೇಳಿದರು.ಕೆಪಿಸಿಸಿ ಹುದ್ದೆ ಆಕಾಂಕ್ಷಿ ವಿಚಾರದ ಕುರಿತು ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದರು.
ನಾನಿದ್ದೇನೆ ನನ್ನ ಪಕ್ಷ ಇದೆ ಹೈಕಮಾಂಡ್ ಇದೆ.. ಯಾರೂ ಮಾತನಾಡುವ ಅಗತ್ಯ ಇಲ್ಲ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಅವರ ಅಭಿಪ್ರಾಯ ಹೇಳಿದ್ದಾರೆ ಅದರಲ್ಲಿ ತಪ್ಪೇನಿದೆ?. 113 ಜನ ಶಾಸಕರು ಬೇಕು, ಸರ್ಕಾರ ಮಾಡ್ಲಿಕ್ಕೆ ..ಅದು ಅವರ ಗಮನದಲ್ಲೂ ಇದೆ. ಡಿಕೆಶಿ ಹೇಳಿಕೆಗೆ ನಾನು ಯಾಕೆ ಕಮೆಂಟ್ ಮಾಡಲಿ ಎಂದರು.
ಪಕ್ಷದ ತಳ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳಬೇಕು. ಈ ಕೆಲಸವನ್ನು ಮಾಡಿ ಪಕ್ಷ ಸಂಘಟಿಸ ಬೇಕು ಎನ್ನುವ ಉದ್ದೇಶ ನನ್ನದು. ಬೇರೆ ಸಮುದಾಯ ವನ್ನು ವಿರೋಧಿಸಬೇಕು, ದ್ವೇಶ ಮಾಡಬೇಕು ಎಂದು ಅರ್ಥ ಅಲ್ಲ. ಎಲ್ಲ ಸಮುದಾಯಗಳಲ್ಲಿ ವಿಶ್ವಾಸ ಮೂಡಿಸುವ ಕೆಲಸ ಆಗಬೇಕು. ಆ ಕೆಲಸ ಮಾಡಲು ನಾನು ಕೆಪಿಸಿಸಿ ಅಧ್ಯಕ್ಷ ಹುದ್ದೆ ಬಯಸಿದ್ದೇನೆ. ಆದರೆ ಅಧ್ಯಕ್ಷನನ್ನಾಗಿ ಮಾಡಲೇಬೇಕು ಎಂದು ಒತ್ತಾಯಿಸಿಲ್ಲ ಎಂದು ಹೇಳಿದರು.
ಅಸೆಂಬ್ಲಿ ಪಾರ್ಲಿಮೆಂಟ್ ಚುನಾವಣೆಗೆ ಒಂದು ಹಂತದ ಮುಖಂಡರಿಗೆ ಅಧಿಕಾರ ಕೊಡುವಂತದ್ದು. ಗ್ರಾಮ ಜಿಲ್ಲಾ ತಾಲೂಕು ಪಂಚಾಯಿತಿ ಚುನಾವಣೆಯ ಲ್ಲಿ ಕಾರ್ಯಕರ್ತರೇ ಪಕ್ಷದ ಆಧಾರ ಸ್ಥಂಬ. ಇದು ಕಾರ್ಯಕರ್ತರಿಗೆ ಅಧಿಕಾರ ಕೊಡುವ ಚುನಾವಣೆ. ಈ ಚುನಾವಣೆಯನ್ನು ತೀವ್ರವಾಗಿ ಪರಿಗಣಿಸಿ ಕಾರ್ಯಕರ್ತರಿಗೆ ಅಧಿಕಾರ ಹಂಚಬೇಕು. ಮುಂದಿನ ಲೋಕಸಭೆ ವಿಧಾನಸಭಾ ಚುನಾವಣೆಗೆ ಇದರಿಂದ ಅನುಕೂಲವಾಗುತ್ತದೆ. ಕಾರ್ಯಕರ್ತರು ಉತ್ಸಾಹದಿಂದ ಪಕ್ಷದ ಪರ ಕೆಲಸ ಮಾಡುತ್ತಾರೆ. ಕಾರ್ಯಕರ್ತರಿಗೆ ಅಧಿಕಾರ ಕೊಡುವ ಉದ್ದೇಶ ಇಟ್ಟುಕೊಂಡು ನಾನು ನನ್ನ ಮಾತುಗಳನ್ನು ಹೇಳಿದ್ದೇನೆ ಎಂದರು.
ಬಣ ರಾಜಕೀಯ ಯಾವ ಪಕ್ಷದಲ್ಲಿ ಇಲ್ಲ ಹೇಳಿ?. ಒಂದು ಪಕ್ಷದಲ್ಲಿ ಜಾಸ್ತಿ ಇರಬಹುದು ಇನ್ನೊಂದು ಪಕ್ಷದಲ್ಲಿ ಕಡಿಮೆ ಇರಬಹುದು. ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಎಲ್ಲಾ ಕಡೆ ಬಣ ರಾಜಕೀಯ ಇದೆ. ಕಾಂಗ್ರೆಸ್ 1880 ರಲ್ಲಿ ಪ್ರಾರಂಭ ಆದಾಗಲೇ ಬಣ ರಾಜಕೀಯ ಇತ್ತು. ಬಣರಾಜಕೀಯ ಇರುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಒಳ್ಳೆಯದು. ಪವರ್ ಶೇರಿಂಗ್ ಬಗ್ಗೆ ನನಗೆ ಗೊತ್ತಿಲ್ಲ, ಅದನ್ನು ಅವರೇ ಹೇಳಬೇಕು. ಇದು ಹೈಕಮಾಂಡ್ ಮಟ್ಟದಲ್ಲಿ ನಿರ್ಣಯಾಗುವ ವಿಚಾರ. ಪವರ್ ಸೇರಿ ಆಗಿದೆಯೋ ಆಗಿಲ್ಲವೋ ಗೊತ್ತಿಲ್ಲ. ಅಂತಿಮವಾಗಿ ಹೈಕಮಾಂಡ್ ನಿರ್ಣಯ ಮಾಡುತ್ತೆ.ನಾನು ಕಾಂಗ್ರೆಸ್ ಪಕ್ಷದ ಜೊತೆ ಇರುವವ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದೇನೆ, ನನ್ನ ಮುಖಂಡನನ್ನು ಡಿಪೆಂಡ್ ಮಾಡುವುದು ನನ್ನ ಜವಾಬ್ದಾರಿ ಎಂದು ಹೇಳಿದರು.