ಕ್ರೈಸ್ತ ಅಭಿವೃದ್ಧಿ ನಿಗಮ ತಕ್ಷಣವೇ ಸ್ಥಾಪನೆಯಾಗಬೇಕು: ಐವನ್ ಡಿಸೋಜಾ ಆಗ್ರಹ
ಮಂಗಳೂರು: ಮರಾಠ ನಿಗಮದ ಬೆನ್ನಲ್ಲೇ ಕ್ರೈಸ್ತ ಅಭಿವೃದ್ದಿ ನಿಗಮಕ್ಕೆ ಒತ್ತಡ ಹೆಚ್ಚಿದ್ದು, ಕ್ರೈಸ್ತರಲ್ಲಿಯೂ ಬಡಜನರಿದ್ದಾರೆ. ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆಗೆ ನಮ್ಮ ಒತ್ತಾಯವಿತ್ತು. ಆದರೆ ಸರಕಾರ ನಮ್ಮ ಮನವಿಗೆ ಸರಿಯಾಗಿ ಸ್ಪಂದಿಸಿಲ್ಲ. ಕ್ರೈಸ್ತ ಅಭಿವೃದ್ಧಿ ನಿಗಮ ತಕ್ಷಣವೇ ಸ್ಥಾಪನೆಯಾಗಬೇಕು ಎಂದು ಕೆಪಿಸಿಸಿ ವಕ್ತಾರ ಐವಾನ್ ಡಿಸೋಜಾ ಆಗ್ರಹಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕ್ರೈಸ್ತರಲ್ಲಿಯೂ ಅನೇಕ ಬಡಜನರಿದ್ದಾರೆ. ಆದರೆ ಸರಕಾರ ನಮ್ಮ ಮನವಿಗೆ ಸರಿಯಾಗಿ ಸ್ಪಂದಿಸಿಲ್ಲ. ರಾಜ್ಯದ ಕ್ರೈಸ್ತರನ್ನ ಹೋರಾಟಕ್ಕೆ ಇಳಿಯುವಂತೆ ಮಾಡುವೆವು. ಜನರು ಬೀದಿಗೆ ಬಂದರೆ ಸರಕಾರವೇ ನೇರ ಕಾರಣ ಎಂದರು.
ಕ್ರೈಸ್ತರನ್ನು ಯಾರೂ ಕೂಡಾ ಕೀಳಾಗಿ ಕಾಣಬೇಡಿ. ಕ್ರೈಸ್ತ ಸಮುದಾಯದ ಮೌನ, ಅವರ ದೌರ್ಬಲ್ಯವಲ್ಲ ಎಂದರು. ಬಿಷಪ್ ಸನ್ಮಾನ ಸ್ವೀಕರಿಸಿ ಸಿಎಂ ಅವರು ಅನುಮೋದನೆ ನೀಡುವುದಾಗಿ ಹೇಳಿದ್ದರು. ಆದರೆ, ಅನಂತರ ಯಾಕಾಗಿ ರದ್ದು ಮಾಡಿದ್ದೀರಿ?. ತಕ್ಷಣವೇ ಸಿಎಂ ಇದಕ್ಕೆ ಉತ್ತರ ಕೊಡಬೇಕು. ನಿಗಮಕ್ಕಾಗಿ 55 ಕೋಟಿ. ರೂ. ಇಟ್ಟಿದ್ದನ್ನು ಏನು ಮಾಡಿದ್ದೀರಿ?” ಎಂದು ಪ್ರಶ್ನಿಸಿದರು.
ಚರ್ಚ್ ದಾಳಿಯಾದಾಗಲೂ ತಾಳ್ಮೆ ವಹಿಸಿದ್ದೇವೆ. ಕ್ರೈಸ್ತರಿಗಾಗಿ ಸರಕಾರ ಚಿಕ್ಕಾಸು ಖರ್ಚು ಮಾಡಿಲ್ಲ. ನಿಗಮ ಕೊಟ್ಟಿದ್ದೇವೆ ಅಂತಾ ಜಾಹೀರಾತು ನೀಡಿದ್ದರು, ಈಗ ಎಲ್ಲಿದೆ ಎಂದು ಪ್ರಶ್ನಿಸಿದರು.