ಅಂಬೇಡ್ಕರ್‌ಗೆ ಅನ್ಯಾಯ ಮಾಡಿದವರೇ ಈಗ ಬೇರೆ ಪಕ್ಷಕ್ಕೆ ಕೈ ತೋರಿಸುತ್ತಿದ್ದಾರೆ- ಅಣ್ಣಾಮಲೈ

ಉಡುಪಿ: ಈಗ ರೆಡ್ ಬುಕ್ ಕೈಯಲ್ಲಿ ಹಿಡಿದು ಸಂವಿಧಾನ ಉಳಿಸಿ ಎನ್ನುವ ನಾಯಕರು, ಅವರ ಅಜ್ಜಿ, ತಂದೆ ಸಂವಿಧಾನದ ಜೊತೆ ಏನು ಮಾಡಿದ್ದಾರೆ ನೋಡಿಕೊಳ್ಳಲಿ, ಆಗ ಅವರಿಗೆ ರೆಡ್ ಬುಕ್ ತರುವ ಅಗತ್ಯ ಬರಲಿಕ್ಕಿಲ್ಲ ಎಂದು ಬಿಜೆಪಿ ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪರೋಕ್ಷ ಸಲಹೆ ನೀಡಿದ್ದಾರೆ.

ಅವರು ಶನಿವಾರ, ಉಡುಪಿಯ ಪುರಭವನದಲ್ಲಿ ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟಿಸ್ ಆಯೋಜಿಸಿದ ಸಂವಿಧಾನ ಸಮ್ಮಾನ್ ಅಭಿಯಾನ ಮತ್ತು ” ಸಂವಿಧಾನ ಬದಲಾಯಿಸಿದ್ದು ಯಾರು..?” ಎಂಬ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಮಾತನಾಡಿದರು.

ಅಂಬೇಡ್ಕರ್ ಅವರ ಹೆಸರನ್ನು ಓಟು ಬ್ಯಾಂಕ್ ರಾಜಕೀಯಕ್ಕೆ ಬಳಸಿಕೊಂಡು, ಅವರಿಗೆ ಅನ್ಯಾಯ ಮಾಡಿದವರು, ಇವತ್ತು ಇನ್ನೊಂದು ಪಕ್ಷಕ್ಕೆ ಕೈ ತೋರಿಸಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

ಹಿಂದೆ ಸಂವಿಧಾನಕ್ಕೆ ಮತ್ತು ಅಂಬೇಡ್ಕರ್ ಅವರಿಗೆ ಮಾಡಿರುವ ಅನ್ಯಾಯ, ಅವಮಾನಗಳನ್ನು ಸರಿಪಡಿಸಲು, ಮೊರಾರ್ಜಿ ದೇಸಾಯಿ, ವಿ.ಪಿ.ಸಿಂಗ್ ಮತ್ತು ವಾಜಪೇಯಿ ಅವರ 5 ಐದು ವರ್ಷಗಳ ಅವಧಿ ಹಾಗು ಈಗಿನ ನರೇಂದ್ರ ಮೋದಿಯವರ 10 ವರ್ಷಗಳ ಅವಧಿ ಕೂಡ ಸಾಕಾಗುತ್ತಿಲ್ಲ ಎಂದರು.

ಸಂವಿಧಾನದ 106 ತಿದ್ದುಪಡಿಗಳಲ್ಲಿ ಮೋದಿಯವರು ಮಾಡಿದ 8 ಸಂವಿಧಾನ ತಿದ್ದುಪಡಿಗಳು ಅಂಬೇಡ್ಕರ್ ಆಶಯಕ್ಕೆ ವಿರೋಧವಾಗಿಲ್ಲ. ಉಳಿದ ತಿದ್ದುಪಡಿಗಳ ನ್ನು ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳಲು ಮಾಡಿದೆ. ಮೋದಿಯವರ ಮಹಿಳಾ ಮೀಸಲಾತಿ ಇತ್ಯಾದಿ ತಿದ್ದುಪಡಿಗಳನ್ನು ಅಂಬೇಡ್ಕರ್ ಅವರೇ ಬಯಸಿದ್ದರು. ಆದರೆ ಬಿಜೆಪಿಯವರು ಸಂವಿಧಾನವನ್ನು ತಿದ್ದುತ್ತಿದ್ದಾರೆ ಎಂದು ಕಾಂಗ್ರೆಸ್ ಚುನಾವಣೆಯ ಸಂದರ್ಭದಲ್ಲಿ ಅಪಪ್ರಚಾರ ಮಾಡುತ್ತಿದೆ ಎಂದು ಖಾರವಾಗಿ ನುಡಿದರು.

ಸಂವಿಧಾನವನ್ನು ಉಳಿಸುವುದಲ್ಲ, ಬಲಪಡಿಸಬೇಕು. ಇದುವರೆಗೆ ಇತಿಹಾಸದ ಪುಸ್ತಕಗಳಲ್ಲಿ ಅಂಬೇಡ್ಕರ್ ಅವರಿಗೆ ಅನ್ಯಾಯ ಮಾಡಲಾಗಿದೆ. ನೈಜ ಇತಿಹಾಸವ ನ್ನು ಮುಚ್ಚಿಡಲಾಗಿತ್ತು. ಇಂದಿನ ಮುಂದಿನ ಪೀಳಿಗೆಗೆ ಇತಿಹಾಸದ ಬಗ್ಗೆ ತಿಳಿಸುವ ಅವಶ್ಯಕತೆ ಇದೆ. ಸಂವಿಧಾನ ಬಿಟ್ಟು ಬದುಕು, ಭವಿಷ್ಯ ಇಲ್ಲ ಎಂದವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಕುಲ್ ದಾಸ್ ಬಾರೂಕೂರು ವಹಿಸಿದ್ದರು.ವೇದಿಕೆಯಲ್ಲಿ ಸಂವಿಧಾನ ಸಮ್ಮಾನ್ ಅಭಿಯಾನದ ವಿಭಾಗ ಸಂಚಾಲಕ ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ಚಿಂತಕಿ ಪ್ರಪುಲ್ಲಾ ಮಲ್ಲಾಡಿ ಉಪಸ್ಥಿತರಿದ್ದರು.

ಸಂವಿಧಾನ ಸಮ್ಮಾನ್ ಅಭಿಯಾನದ ಜಿಲ್ಲಾ ಸಂಚಾಲಕಿ ರೇಷ್ಮಾ ಉದಯ್ ಶೆಟ್ಟಿ ಸ್ವಾಗತಿಸಿದರು. ರತ್ನಾಕರ್ ಇಂದ್ರಾಳಿ ನಿರೂಪಿಸಿದರು.

ವಿಕಾಸ್ ಪುತ್ತೂರು ಬರೆದ “ಸಂವಿಧಾನ ಬದಲಾಯಿಸಿದ್ದು ಯಾರು..?” ಪುಸ್ತಕವನ್ನು ಅಣ್ಣಾಮಲೈ ಬಿಡುಗಡೆಗೊಳಿಸಿದರು.

Leave a Reply

Your email address will not be published. Required fields are marked *

error: Content is protected !!