ಫೆ.16: ಉಡುಪಿಯಲ್ಲಿ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರದಾನ 

ಉಡುಪಿ: ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ 2024ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷ ಸಿರಿ ವಾರ್ಷಿಕ ಪ್ರಶಸ್ತಿ ಹಾಗೂ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭವು ಫೆ. 16ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ. 

ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ  ಕಾರ್ಯಕ್ರಮದ ವಿವರ ನೀಡಿ, ಇಲಾಖಾ ಸಚಿವರು, ಉಸ್ತುವಾರಿ ಸಚಿವರು, ಶಾಸಕರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ಪ್ರಶಸ್ತಿ ಪುರಸ್ಕೃತರ ಕಿರು ಪರಿಚಯ ಪುಸ್ತಕ ಬಿಡುಗಡೆ ಮಾಡಲಾಗುವುದು ಎಂದರು. 

ಪಾರ್ತಿಸುಬ್ಬ ಪ್ರಶಸ್ತಿ 

ತೆಂಕುತಿಟ್ಟು ಯಕ್ಷಗಾನ ಕಲಾವಿದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಒಂದು ಲಕ್ಷ ರೂ.ನಗದು ಹೊಂದಿದ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 

ಐವರಿಗೆ ಗೌರವ ಪ್ರಶಸ್ತಿ 

ಅಕಾಡೆಮಿಯ 2024ನೇ ಗೌರವ ಪ್ರಶಸ್ತಿಗೆ ಬೆಳ್ತಂಗಡಿಯ ತೆಂಕುತಿಟ್ಟು ಕಲಾವಿದ ಕೊಳ್ತಿಗೆ ನಾರಾಯಣ ಗೌಡ , ಬಡಗುತಿಟ್ಟು ಕಲಾವಿದ ಕುಂದಾಪುರದ ಕೋಡಿ ವಿಶ್ವನಾಥ ಗಾಣಿಗ, ಪ್ರಸಾದನ ಕಲಾವಿದ ರಾಘವ ದಾಸ್ ಬಂಟ್ವಾಳ, ತೆಂಕುತಿಟ್ಟಿನ ಸುಬ್ರಾಯ ಹೊಳ್ಳ ಬಂಟ್ವಾಳ, ಮೂಡಲಪಾಯ ಯಕ್ಷಗಾನದ ಕಾಂತರಾಜು ಅರಳಗುಪ್ಪೆ ತುಮಕೂರು ಆಯ್ಕೆಯಾಗಿದ್ದು ತಲಾ 50 ಸಾವಿರ ರೂ. ನೀಡಲಾಗುವುದು. 

ಯಕ್ಷಸಿರಿ ಪ್ರಶಸ್ತಿ

ಯಕ್ಷ ಸಿರಿ ವಾರ್ಷಿಕ ಪ್ರಶಸ್ತಿಗೆ ಕಾಸರಗೋಡಿನ ಹಿರಿಯ ಅರ್ಥಧಾರಿ ಅಡ್ಕ ಗೋಪಾಲಕೃಷ್ಣ ಭಟ್, ಉಡುಪಿ ಬಡಗುತಿಟ್ಟಿನ ಜಗನ್ನಾಥ ಆಚಾರ್ಯ ಎಲ್ಲಂಪಲ್ಲಿ, ಕಾಸರಗೋಡಿನ ತೆಂಕುತಿಟ್ಟು ಹಾಸ್ಯಗಾರ ಮವ್ವಾರು ಬಾಲಕೃಷ್ಣ ಮಣಿಯಾಣಿ, ಮಂಗಳೂರಿನ ತೆಂಕುತಿಟ್ಟು ಬಣ್ಣದ ವೇಶದಾರಿ ಉಮೇಶ್ ಕುಪ್ಪೆಪದವು,ಶಿವಮೊಗ್ಗ ಬಡಗುತಿಟ್ಟು ಸ್ತ್ರೀ ವೇಷದಾರಿ ಶಿವಾನಂದ ಗೀಜಗಾರು, ಹೊನ್ನಾವರದ ಬಡಗುತಿಟ್ಟು ಸ್ತ್ರೀ ವೇಷಧಾರಿ ಮುಗ್ವಾ ಗಣೇಶ್ ನಾಯ್ಕ, ಮಂಗಳೂರಿನ ತೆಂಕುತಿಟ್ಟು ವೇಷದಾರಿ ಸುರೇಂದ್ರ ಮಲ್ಲಿ, ಮಂಗಳೂರಿನ ಪ್ರಸಂಗಕತ್೯ ಅಂಡಾಲ ದೇವಿಪ್ರಸಾದ್ ಶೆಟ್ಟಿ, ಬೆಂಗಳೂರು ಗ್ರಾಮಾಂತರ ಮೂಡಲಪಾಯ ಯಕ್ಷಗಾನದ ಕೃಷ್ಣಪ್ಪ, ಚಿಕ್ಕಮಗಳೂರಿನ ಬಡಗು ತೆಂಕುತಿಟ್ಟಿನ ಹಳುವಲ್ಲಿ ಜ್ಯೋತಿ ತಲಾ 25 ಸಾವಿರರೂ. ನಗದು ಪಡೆಯಲಿದ್ದಾರೆ. 

ದತ್ತಿನಿಧಿ ಪ್ರಶಸ್ತಿ

ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ದತ್ತಿನಿಧಿ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಕರ್ಗಲ್ಲೂ ವಿಶ್ವೇಶ್ವರ ಭಟ್ ಆಯ್ಕೆಯಾಗಿದ್ದು 25 ಸಾವಿರ ರೂ. ನಗದು ಪಡೆವರು ಎಂದು ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ರಿಜಿಸ್ಟ್ರಾರ್ ನಮ್ರತಾ ಎನ್. ಅಕಾಡೆಮಿ ಸದಸ್ಯರಾದ ಸತೀಶ್ ಅಡಪ ಸಂಕಬೈಲ್, ಸುಧಾಕರ ಶೆಟ್ಟಿ, ರಾಘವ ಎಚ್. ಕೃಷ್ಣಪ್ಪ ಪೂಜಾರಿ ಕಿನ್ಯಾ, ದಯಾನಂದ, ಮೋಹನ ಕೊಪ್ಪಲ ಕದ್ರಿ, ಗುರುರಾಜ ಭಟ್, ರಾಜೇಶ್ ಕುಳಾಯಿ, ವಿದ್ಯಾಧರ ವೆಂಕಟೇಶ ಮಡಿವಾಳ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!