ಬೇಕಾಬಿಟ್ಟಿ ಪ್ಯಾಕೇಜ್ ಘೋಷಣೆ- ಬೊಕ್ಕಸದ ಹಣ ಯಾರದೋ ಜಮೀನು ನುಂಗಿ- ನೀರು ಕುಡಿದು ಸಂಪಾದಿಸಿದ ಸ್ವಯಾರ್ಜಿತ ಸೈಟಲ್ಲ- ಸುನಿಲ್ ಕುಮಾರ್
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಗಾಂಧಿವಾದದಿಂದ ಮಾವೋವಾದಕ್ಕೆ ಹೊರಳಿದೆ ಎಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಸರ್ಕಾರದ ನಕ್ಸಲ್ ಪ್ಯಾಕೇಜ್ ಬಗ್ಗೆ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಅವರು, ಫೇಸ್ ಬುಕ್ ನಲ್ಲಿ ಸರ್ಕಾರದ ನಡೆಯನ್ನು ಖಂಡಿಸಿದರೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವವರು, ಈಗ ಬಂದೂಕು ಹಿಡಿದು ಗುಂಡಿಟ್ಟು ಭಯ ಸೃಷ್ಟಿಸುವವರಿಗೆ ಹೂಗುಚ್ಚ ಕೊಟ್ಟು ಸ್ವಾಗತಿಸಿ ಸಮೋಸಾ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯ ಅವರ ಗೃಹ ಕಚೇರಿ ಅರ್ಬನ್ ನಕ್ಸಲರ ಪಾಲಿಟ್ ಬ್ಯೂರೋ ಆಗಿ ಬದಲಾಗಿದೆ. ಖುದ್ದು ಸಿದ್ದರಾಮಯ್ಯನವರೇ ಅರ್ಬನ್ ನಕ್ಸಲರ ಕೋರ್ ಕಮಿಟಿ ಸದಸ್ಯರಾಗಿದ್ದಾರೆ. ಕಾಂಗ್ರೆಸ್ ತತ್ವ- ಸಿದ್ಧಾಂತ ಅರ್ಬನ್ ನಕ್ಸಲರು ಹೈಜಾಕ್ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ. ಅಮಾಯಕರಿಗೆ ಕ್ಷಮಾದಾನ ನೀಡಲೇಬಾರದು ಎಂಬುದು ನಮ್ಮ ವಾದವಲ್ಲ. ಆದರೆ ಶರಣಾದ ರೀತಿ, ಪ್ಯಾಕೇಜ್ ಘೋಷಣೆ ವಿಧಾನ, ಪ್ರಕರಣ ರದ್ಧತಿ ವಿಚಾರದಲ್ಲಿ ಸರ್ಕಾರ ನಡೆದುಕೊಂಡ ರೀತಿಯ ಬಗ್ಗೆ ಆಕ್ಷೇಪವಿದೆ. ಸಿದ್ದರಾಮಯ್ಯನವರ ಕೋರ್ ಕಮಿಟಿ ಸದಸ್ಯರು ಸಾಮಾಜಿಕ ಜಾಲತಾಣ ದಲ್ಲಿ ಎಷ್ಟೇ ಅರಚಿದರೂ ನಾವು ಹೆದರುವುದಿಲ್ಲ. ಅಷ್ಟಕ್ಕೂ ಬೇಕಾಬಿಟ್ಟಿ ಪ್ಯಾಕೇಜ್ ಘೋಷಿಸುವುದಕ್ಕೆ ರಾಜ್ಯದ ಬೊಕ್ಕಸದ ಹಣ ಯಾರದೋ ಜಮೀನು ನುಂಗಿ- ನೀರು ಕುಡಿದು ಸಂಪಾದಿಸಿದ ಸ್ವಯಾರ್ಜಿತ ಸೈಟಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಶರಣಾಗತಿ ಪ್ರಕ್ರಿಯೆ ಬಗ್ಗೆ ಸಾಕಷ್ಟು ಅನುಮಾನ ಗಳಿವೆ. ವಿಕ್ರಮ್ ಗೌಡ ಎನ್ ಕೌಂಟರ್ ಬಳಿಕ ಅರ್ಬನ್ ನಕ್ಸಲರು ಶರಣಾಗತಿ ಪ್ರಕ್ರಿಯೆ ಬಗ್ಗೆ ನಡೆಸಿದ ಪ್ರಹಸನದಲ್ಕಿ ಸಿಎಂ ನಿರ್ದೇಶನದ ಭಾಗವೆಷ್ಟು ಎಂಬುದು ಬಹಿರಂಗವಾಗಬೇಕು ಎಂದು ಆಗ್ರಹಿಸಿದ್ದಾರೆ. ಒಂದೆಡೆ ನಕ್ಸಲ್ ಶರಣಾಗತಿ ಬಗ್ಗೆ ಮಾತನಾಡುವ ಸರ್ಕಾರ, ಅರಣ್ಯ ವಾಸಿಗಳಿಗ ಪುನರ್ಸತಿ ಬಗ್ಗೆ ಯಾವ ನಿಲುವು ಹೊಂದಿದೆ ಎಂಬುದನ್ನೂ ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದ್ದಾರೆ.
ವಿ ಸುನಿಲ್ ಕುಮಾರ್ ಪ್ರಧಾನ ಕಾರ್ಯದರ್ಶಿ, ಬಿಜೆಪಿ ಕರ್ನಾಟಕ ಶಾಸಕರು ಕಾರ್ಕಳ, ಮಾಜಿ ಸಚಿವರು, ಕರ್ನಾಟಕ ಸರ್ಕಾರ