ಉಡುಪಿ ಸವಿತಾ ಸಮಾಜ ಸೌಹಾರ್ದ ಸಹಕಾರಿ ಸಂಘ: ರಕ್ತ ಪರೀಕ್ಷಾ ಕೇಂದ್ರಕ್ಕೆ ಚಾಲನೆ
ಉಡುಪಿ: ಸವಿತಾ ಸಮಾಜದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ 66 ರ ಸನಿಹದಲ್ಲಿರುವ ಜಿಲ್ಲಾ ಸವಿತಾ ಸಮುದಾಯ ಭವನದಲ್ಲಿ ನೂತನವಾಗಿ ಆರಂಭಗೊಂಡ ರಕ್ತ ಪರೀಕ್ಷಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಮಂಗಳವಾರ ಜರುಗಿತು.
ಸವಿತಾ ಡಯಾಗ್ನೋಸ್ಟಿಕ್ ಸೆಂಟರ್ ಅನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆ ಸರ್ಜನ್ ಡಾ.ಹೆಚ್ ಅಶೋಕ್ ಉದ್ಘಾಟಿಸಿದರು. ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಸವಿತಾ ಸಮಾಜ ಸಣ್ಣ ಸಮುದಾಯವಾಗಿದ್ದರೂ ಸಮಾಜ ಹಾಗೂ ದೇಶಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಜಾತಿ ಸಂಘಟನೆ ಗಟ್ಟಿಗೊಳಿಸುವುದರ ಜೊತೆಗೆ ಹಿಂದೂ ಸಮಾಜ ಸದೃಢಗೊಳಿಸುವುದು ಬಹಳ ಮುಖ್ಯ. ಇದೊಂದು ದೇಶಭಕ್ತ ಸಮಾಜವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸವಿತಾ ಸಮಾಜದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಅಂಬಲಪಾಡಿ ಅಧ್ಯಕ್ಷ ನವೀನ್ಚಂದ್ರ ಮಣಿಪಾಲ, ಸಹಕಾರಿ ಚಳುವಳಿಯಲ್ಲಿ ಪ್ರಥಮ ಬಾರಿಗೆ ಕ್ಲಿನಿಕಲ್ ಲ್ಯಾಬೋರೇಟರಿ ಆರಂಭಗೊಂಡಿದೆ. ಈ ಸೆಂಟರ್ ಸಮುದಾಯದ ಆರೋಗ್ಯದ ಮೇಲೆ ಗಮನಹರಿಸಲು ಮತ್ತು ಉತ್ತಮ ಗುಣಮಟ್ಟದ ವೈದ್ಯಕೀಯ ಪರೀಕ್ಷಾ ಕೇಂದ್ರವಾಗಿ ಸಹಕರಿಯಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೋಟ್ಯಾಡಿ ಅವರನ್ನು ಸನ್ಮಾನಿಸಲಾಯಿತು.
ಮುಖ್ಯಅತಿಥಿಗಳಾಗಿ ನಗರ ಸಭೆ ಸದಸ್ಯ ಹರೀಶ್ ಶೆಟ್ಟಿ, ರಾಯಚೂರು ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷ ವಿಜಯ ಭಾಸ್ಕರ್ ಇಡಗಿ, ದ. ಕ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಆನಂದ ಭಂಡಾರಿ, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ವಿಶ್ವನಾಥ ಭಂಡಾರಿ, ಜಿಲ್ಲಾ ಪರಿಯಾಳ ಸಮಾಜ ಸುಧಾರಕರ ಸಂಘದ ಜಿಲ್ಲಾಧ್ಯಕ್ಷ ಶಂಕರ್ ಸಾಲಿಯಾನ್, ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಗುರುದಾಸ್ ಭಂಡಾರಿ, ಜಿಲ್ಲಾ ಸವಿತಾ ಸಮಾಜ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ, ಉಡುಪಿ ತಾಲ್ಲೂಕು ಸವಿತಾ ಸಮಾಜ ಅಧ್ಯಕ್ಷ ರಾಜು ಭಂಡಾರಿ ಕಿನ್ನಿಮೂಲ್ಕಿ, ಸೌಹಾರ್ದ ಸಹಕಾರಿಯ ಸಿಇಒ ಮಾಲತಿ ಅಶೋಕ್ ಭಂಡಾರಿ ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಗೋವಿಂದ ಭಂಡಾರಿ ಬನ್ನಂಜೆ ಪ್ರಸ್ತಾವನೆಗೈದರು. ಸತ್ಯವತಿ ನಾಗೇಶ್ ಕಾಪು ಸ್ವಾಗತಿಸಿ, ಮಂಜುನಾಥ ಭಂಡಾರಿ ಪಡುಕೆರೆ ವಂದಿಸಿದರು.