ಹೆಬ್ರಿ: ರಾ.ಹೆದ್ದಾರಿ ಬೇಕಾಬಿಟ್ಟಿ ಕಾಮಗಾರಿಗೆ ಯುವಕ ಬಲಿ- ಸ್ಥಳೀಯರಿಂದ ಆಕ್ರೋಶ, ಗರಿಷ್ಠ ಪರಿಹಾರಕ್ಕೆ ಮನವಿ
ಉಡುಪಿ: ರಾಷ್ಟ್ರೀಯ ಹೆದ್ದಾರಿ 169ಎಯ ಕಾಮಗಾರಿ ಶಿವಪುರದಲ್ಲಿ ನಡೆಯುತ್ತಿದೆ. ಡಿ. 4ರಂದು ರಸ್ತೆ ಅಪಘಾತದಲ್ಲಿ ಮೃತಪಟ್ಟ ಆರ್.ಎಸ್.ಎಸ್‌ನ ಸಕ್ರಿಯ ಕಾರ್ಯಕರ್ತ ರಾಹುಲ್ ಅವರು ರಾಷ್ಟ್ರೀಯ ಹೆದ್ದಾರಿ ಅವರು ಬೇಕಾಬಿಟ್ಟಿಯಾಗಿ ಕಾಮಗಾರಿ ನಡೆಸಿ, ಸಮರ್ಪಕ ಸೂಚನ ಫಲಕ ಬಳಸದೆ ಇರುವುದೇ ಅಪಘಾತಕ್ಕೆ ಕಾರಣವಾಗಿದೆ ಎಂದು ಶಿವಪುರದಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹೆದ್ದಾರಿಯ ಇಂಜಿನಿಯರ್, ಕಾರ್ಲ ಕನ್ಸ್ಟ್ರಕ್ಷನ್ ನ ಗುತ್ತಿಗೆದಾರರು ಇದಕ್ಕೆ ನೇರ ಹೊಣೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ, ವ್ಯವಸ್ಥೆಯ ವಿರುದ್ಧ ಅಸಮಾಧಾನ ಹೊರ ಹಾಕಿದರು.
ಗರಿಷ್ಠ 50 ಲಕ್ಷ ಪರಿಹಾರ ಕೊಡಬೇಕು: ವಾಹನಗಳು ಓಡಾಡಲು ಸೂಕ್ತ ಬ್ಯಾರಿಕೇಡ್, ಸೂಚನಾ ಫಲಕಗಳು ಅಪಘಾತದ ಸ್ಥಳದಲ್ಲಿ ಇರಲಿಲ್ಲ, ಅಪಘಾತ ನಡೆಸಿದ ಕಾರು ವೇಗದಿಂದ ಬಂದು ಬೈಕಿಗೆ ಡಿಕ್ಕಿಯಾಗಿದೆ. ಗುತ್ತಿಗೆದಾರರು ನಿಯಮಗಳನ್ನು ಉಲ್ಲಂಘಿಸಿರುವುದರಿಂದ ನಮ್ಮ ಮನೆ ಮಗನನ್ನು ನಾವು ಕಳೆದುಕೊಂಡಿದ್ದೇವೆ. ಇದಕ್ಕೆ ಗರಿಷ್ಠ 50 ಲಕ್ಷ ರೂ.ಪರಿಹಾರ ದೊರಕಿಸಿಕೊಡಬೇಕು. ಇಲ್ಲದಿದ್ದಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಲಾಗುವುದೆಂ ದು ಮೃತ ರಾಹುಲ್ ಅವರ ಮಾವ ಶ್ರೀಧರ ಶೆಟ್ಟಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಮೃತದೇಹ ಬರುವಾಗ ಬ್ಯಾರಿಕೆಡಿಟ್ಟರು: ರಾಹುಲ್ ಅವರ ಶವವನ್ನು ಶಿವಪುರ ಪೇಟೆಯಲ್ಲಿ ಮೆರವಣಿಗೆ ಬರುತ್ತಿರುವಾಗ ಗಮನಿಸಿ ಗುತ್ತಿಗೆದಾರರು, ಬ್ಯಾರಿಕೆಡ್ ಹಾಕುವ ವ್ಯವಸ್ಥೆ ಮಾಡಿದ್ದಾರೆ. ಮೊದಲೇ ಈ ರೀತಿಯ ಸೂಚನ ಫಲಕ ಅಥವಾ ಬ್ಯಾರಿಕೆಟ್ ಬಳಸಿದ್ದರೆ, ಊರಿನ ಒಬ್ಬ ಮಗನನ್ನು ನಾವುಉಳಿಸಿಕೊಳ್ಳುತ್ತಿದ್ದೆವು ಎಂದು ಸಾರ್ವಜನಿಕರು ದುಃಖ ವ್ಯಕ್ತಪಡಿಸಿದರು.
ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಪೂಜಾರಿ ಮಾತನಾಡಿ ಇಲ್ಲಿ ನಿರಂತರವಾಗಿ ಕಾಮಗಾರಿ ನಡೆಯುವಾಗ ನಿಯಮದ ಉಲ್ಲಂಘನೆ ನಡೆದಿದೆ. ಯಾವುದೇ ಸಮರ್ಪಕವಾದ ಸೂಚನ ಫಲಕಗಳಿಲ್ಲದೆ ಅನೇಕ ಅಪಘಾತಗಳು ನಡೆದಿದೆ. ರೆಫ್ಲೆಕ್ಟರ್ ನ ಅಗತ್ಯವಿದೆ. ಮುಂದೆ ಎಂದಾದರೂ ಅಪಘಾತ ನಡೆದರೆ ಸ್ಥಳದಿಂದ ಶವವನ್ನು ಮುಟ್ಟಲು ಬಿಡುವುದಿಲ್ಲ. ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಗರಿಷ್ಠ ಮಟ್ಟದಲ್ಲಿ ಪರಿಹಾರ ನೀಡುವ ತನಕ ಕದಲುವುದಿಲ್ಲ. ಕಾರ್ಲ ಕನ್ಸ್ಟ್ರಕ್ಷನ್ ಅವರಿಗೆ ಇದು ಎಚ್ಚರಿಕೆ ಎಂದರು.
ತುಂಬಾ ಕಷ್ಟಪಟ್ಟು ರಾಹುಲ್ ಅವರ ಮನೆಯವರು ಜೀವನ ನಡೆಸುತ್ತಿದ್ದಾರೆ. ಮನೆಗೆ ಆಧಾರ ಸ್ತಂಭವಾಗಿ ದ್ದ ಹಿರಿಯ ಮಗನನ್ನು ಕಳೆದುಕೊಂಡು ಕಕ್ಕಾಬಿಕ್ಕಿ ಯಾಗಿದ್ದಾರೆ. ಕಿರಿಯ ಮಗನಿಗೆ ಸ್ಥಳೀಯವಾಗಿ ಉದ್ಯೋಗವನ್ನು ಕಲ್ಪಿಸಿಕೊಡಬೇಕು. ಶಿವಪುರ ಪಂಚಾಯಿತಿಯವರು ಸೂಕ್ತ ಕ್ರಮ ವಹಿಸಬೇಕು. ಮನೆಯಲ್ಲಿ ತಾಯಿ ಒಬ್ಬರು ಇರುವುದರಿಂದ ಉದ್ಯೋಗ ಕಲ್ಪಿಸಿದರೆ ಒಳ್ಳೆಯದಾಗುತ್ತದೆ ಎಂದು ಇಂದಿರಾ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
108 ಸರಿಯಾದ ಸಮಯಕ್ಕೆ ಸಿಗದೇ ರಾಹುಲ್‌ನನ್ನು ಕಳೆದುಕೊಂಡೆವು: ಅಪಘಾತ ನಡೆದು ಕೆಲವು ಸಮಯ ಕಳೆದರೂ 108 ಅಂಬುಲೆನ್ಸ್ ಸೇವೆಗೆ ಸಿಗದೇ, ಬಹಳಷ್ಟು ಹಿನ್ನಡೆಯಾಯಿತು.ಒಂದು ವೇಳೆ ಶೀಘ್ರದಲ್ಲಿ ಆಂಬುಲೆನ್ಸ್ ಸೇವೆ ಒದಗಿದ್ದರೆ ಊರಿನ ಯುವಕನನ್ನು ಉಳಿಸಿಕೊಳ್ಳಬಹುದಾಗಿತ್ತು ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.
ಸ್ಥಳೀಯರಾದ ಶ್ರೀನಿವಾಸ್, ಇಂದಿರಾ, ಬಾಬು ಶೆಟ್ಟಿ, ಗುರು ಬಡಿಕಿಲಾಯ, ಶ್ರೀಧರ ಶೆಟ್ಟಿ, ಶೀನ ಇನ್ನಿತರ ಊರಿನ ಮುಖಂಡರು ಜೊತೆಗಿದ್ದರು.