ಸವಿತಾ ಸೌಹಾರ್ದ ಸಹಕಾರ ಸಂಘ: ಟಿಶ್ಯೂ ಪೇಪರ್ ತಯಾರಿಕ ಘಟಕ ಲೋಕಾರ್ಪಣೆ
ಬ್ರಹ್ಮಾವರ: ಸಮಾಜ ಬಾಂಧವರ ಆರ್ಥಿಕ ಸುಧಾರಣೆ ಜತೆಗೆ ಸಾಮಾಜಿಕ ಕಳಕಳಿ, ಜನಪರ ಯೋಜನೆಗಳನ್ನು ಹಮ್ಮಿಕೊಳ್ಳುವಲ್ಲಿ ಉಡುಪಿ ಸವಿತಾ ಸಮಾಜ ವಿ. ಸೌಹಾರ್ದ ಸಹಕಾರಿ ಸಂಘವು ಸರ್ವರಿಗೂ ಮಾದರಿ ಎಂದು ಶಾಸಕ ಯಶಪಾಲ್ ಸುವರ್ಣ ಹೇಳಿದರು.
ಉಪ್ಪೂರು ಅಮ್ಮುಂಜೆಯಲ್ಲಿ ಸವಿತಾ ಸಹಕಾರಿಯಿಂದ ಪ್ರಾರಂಭಿಸಲಾದ ಟಿಶ್ಯೂ ಪೇಪರ್ ತಯಾರಿಕ ಘಟಕವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಸೌಂದರ್ಯ ವೃದ್ಧಿ ಜತೆಗೆ ಸವಿತಾ ಸಮಾಜದ ಏಳಿಗೆಗೆ ಪ್ರಯತ್ನಿಸುವೆ. ಕ್ಷೌರಿಕ ವೃತ್ತಿಯ ಭವಿಷ್ಯದ ದೃಷ್ಟಿಯಿಂದ ತರಬೇತಿ ಕೋರ್ಸ್ ಪ್ರಾರಂಭಿಸುವಂತೆ ಕರೆ ನೀಡಿದರು.
ವೃತ್ತಿ ನಿರತರಿಗೆ ವಿವಿಧ ಸೌಲಭ್ಯ: ಸಂಘದ ಅಧ್ಯಕ್ಷ ನವೀನ್‌ಚಂದ್ರ ಭಂಡಾರಿ ಮಣಿಪಾಲ ಅಧ್ಯಕ್ಷತೆ ವಹಿಸಿ ಸವಿತಾ ಸಹಕಾರಿಯು ವೃತ್ತಿ ನಿರತರಿಗೆ ವಿವಿಧ ಸಹಕಾರ, ವಿದ್ಯಾರ್ಥಿ ವೇತನ, ನಿವೃತ್ತಿ ಸೌಲಭ್ಯ ಸೇರಿದಂತೆ ಬಹುಮುಖಿಯಾಗಿ ನೆರವಾಗುತ್ತಿದೆ. ಹೊಸ ಉದ್ಯಮಗಳನ್ನೂ ಪ್ರಾರಂಭಿಸಿದೆ ಎಂದರು.
ರಾಜಕೀಯ ಬಲ: ಸಮುದಾಯಕ್ಕೆ ಇನ್ನಷ್ಟು ರಾಜ ಕೀಯ ಬಲ ನೀಡುವ ಜತೆಗೆಕ್ಷೌರಿಕ ವೃತ್ತಿ ನಿರತರಿಗೆ ಪ್ಯಾಕೇಜ್, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಸಾಧಕರಿಗೆ ಪ್ರಶಸ್ತಿ ಸೇರಿದಂತೆ ಸರಕಾರ ಯೋಜನೆ ಹಮ್ಮಿ ಕೊಳ್ಳುವಂತೆ ಸವಿತಾ ಸಮಾಜದ ಗೌರವಾಧ್ಯಕ್ಷ ಗೋವಿಂದ ಭಂಡಾರಿ ಬನ್ನಂಜೆ ಆಗ್ರಹಿಸಿದರು.
ಅಂತಾರಾಷ್ಟ್ರೀಯ ಕೇಶ ವಿನ್ಯಾಸಗಾರ ಶಿವರಾಂ ಭಂಡಾರಿ ಮುಂಬಯಿ ಟಿಶ್ಯೂ ಪೇಪರ್ ಉತ್ಪನ್ನ ಬಿಡುಗಡೆಗೊಳಿಸಿದರು. ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಮಂಜುನಾಥ್ ಎಸ್. ಕೆ., ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದ ಪ್ರ. ಕಾರ್ಯದರ್ಶಿ ಬಿ.ಗೋವಿಂದರಾಜ್ ಹೆಗ್ಡೆ, ಹೊಸಪೇಟೆ ನಗರಸಭಾ ಅಧ್ಯಕ್ಷ ರೂಪೇಶ್ ಕುಮಾರ್ ಎನ್., ದ.ಕ. ಸವಿತಾ ಸಮಾಜ ಸಹಕಾರಿ ಅಧ್ಯಕ್ಷ ವಿಶ್ವನಾಥ ಸಾಲಿಯಾನ್, ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್., ಜಿಲ್ಲಾ ಮಹಿಳಾ ಸೌಂದರ್ಯ ತಜ್ಞೆಯರ ಸಂಘದ ಅಧ್ಯಕ್ಷೆ ಕಿಶ್ವರ್ ಜಹಾನ್, ಉಳ್ಳೂರು ಪಂ. ಅಧ್ಯಕ್ಷೆ ಗಾಯತ್ರಿ, ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷ ವಿಶ್ವನಾಥ ಭಂಡಾರಿ ನಿಂಜೂರು, ಸಹಕಾರಿಯ సిఇఒ ಮಾಲತಿ, ಅಶೋಕ್ ಭಂಡಾರಿ ಉಪಸ್ಥಿತರಿದ್ದರು.
ನಿರ್ದೇಶಕರಾದ ಸದಾಶಿವ ಬಂಗೇರ, ಕುರ್ಕಾಲು ಸ್ವಾಗತಿಸಿ, ಶಿವರಾಮ ಭಂಡಾರಿ ಹಂದಾಡಿ ವಂದಿಸಿದರು. ಪಡುಕೆರೆ ಮಂಜುನಾಥ ಭಂಡಾರಿ ನಿರೂಪಿಸಿದರು.