ಜ.10: ನಾಡದೋಣಿ ಮೀನುಗಾರರರಿಂದ ರಸ್ತೆ ತಡೆದು ಪ್ರತಿಭಟನೆ

ಬೈಂದೂರು, ಜ.7: ಮೂರು ಜಿಲ್ಲೆಯಲ್ಲಿನ ಸುಮಾರು 320 ಕಿ.ಮೀ ವ್ಯಾಪ್ತಿಯ ಸಮುದ್ರದಲ್ಲಿ ಲೈಟ್ ಫಿಶಿಂಗ್ ಹಾಗೂ ಬುಲ್ ಟ್ರಾಲ್ ಮೂಲಕ ಮೀನುಗಾರಿಕೆ ಅವೈಜ್ಞಾನಿಕವಾಗಿ ನಡೆಯುತ್ತಿದ್ದು ಇದನ್ನು ವಿರೋಧಿಸಿ ಜ.10ರಂದು ತ್ರಾಸಿ ಬೀಚ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ಅಳ್ವಿಕೋಡಿ ನಾಗೇಶ ಖಾರ್ವಿ ಹೇಳಿದ್ದಾರೆ.

ಉಪ್ಪುಂದ ನಾಡದೋಣಿ ಭವನದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅವೈಜ್ಞಾನಿಕ ಮೀನುಗಾರಿಕೆಯಿಂದ ಮೀನುಗಳ ಸಂತತಿ ಶೀಘ್ರ ನಾಶವಾಗುವ ಭೀತಿ ಎದುರಾಗಿದೆ. ರಾಜ್ಯದಲ್ಲಿ ಲೈಟ್ ಫಿಶಿಂಗ್ ನಿಷೇಧಿಸಿ ಸೂಕ್ತ ಕ್ರಮಕೈಗೊಂಡು ಸಾಂಪ್ರದಾಯಿಕ ನಾಡದೋಣಿ ಮೀನು ಗಾರರನ್ನು ಉಳಿಸುವ ನಿಟ್ಟಿನಲ್ಲಿ ಸರಕಾರ ಮುಂದಾಗಬೇಕೆಂದು ಆಗ್ರಹಿಸಿದರು.

ಲೈಟ್ ಫಿಶಿಂಗ್‌ಗೆ ಕಡಿವಾಣ ಹಾಕದೆ ಇಲಾಖೆಗಳು ಪರೋಕ್ಷವಾಗಿ ಸಹಕಾರ ನೀಡುತ್ತಿದೆ. ಇದರಿಂದ ನಾಡದೋಣಿ ಮೀನುಗಾರರು ಸಂಕಷ್ಟ ಅನುಭವಿಸು ವಂತೆ ಮಾಡುತ್ತಿದ್ದಾರೆ. ಈ ಮೂಲಕ ಮೀನುಗಾರರು ಮುಂದಿನ ದಿನಗಳಲ್ಲಿ ಬೀದಿಗೆ ಬೀಳುವಂತೆ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಬೇಕೆಂದು ಅವರು ತಿಳಿಸಿದರು.

ಜ.10ರಂದು ನಡೆಯುವ ಪ್ರತಿಭಟನೆಯಲ್ಲಿ ಭಟ್ಕಳದಿಂದ ಗಂಗೊಳ್ಳಿಯ ವರೆಗಿನ ಸಾವಿರಕ್ಕೂ ಹೆಚ್ಚು ದೋಣಿಗಳನ್ನು ಸಮುದ್ರದಲ್ಲಿ ಲಂಗರು ಹಾಕಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು. ಇದರಲ್ಲಿ ಮೂರು ಜಿಲ್ಲೆಯ ನಾಡದೋಣಿ ಮೀನುಗಾರರು ಭಾಗವಹಿಸಲಿದ್ದಾರೆ. ಜನಪ್ರತಿನಿಧಿಗಳು, ಸಂಬಂದಪಟ್ಟ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ಸಿಗದೆ ಹೋದರೆ ಜಿಲ್ಲಾಡಳಿತ ಕಚೇರಿ ಎದುರು ಧರಣಿ ನಡೆಸಲು ತಿರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ರಾಜ್ಯ ಒಕ್ಕೂಟದ ಗೌರವ ಸಲಹೆಗಾರ ಮದನ್ ಕುಮಾರ್ ಉಪ್ಪುಂದ ಮಾತನಾಡಿ, ಬೆಳಕು ಬಳಸಿ ಮೀನುಗಾರಿಕೆಯಿಂದ ಮೀನುಗಳ ಸಂತತಿಯ ವಿನಾಶಕ್ಕೆ ಕಾರಣವಾಗುತ್ತದೆ ಎಂದು ಲೈಟ್ ಫಿಶಿಂಗ್‌ಗೆ ನಿಷೇಧಿಸಿ ನ್ಯಾಯಾ ಲಯ ಆದೇಶ ನೀಡಿದೆ. ಮೀನುಗಾರಿಕೆ ಸಚಿವರು ಸದನದಲ್ಲಿ ನಿಷೇಧ ಇದೆ ಎಂದು ಹೇಳಿ ಉತ್ತರ ನೀಡಿದ್ದಾರೆ. ಆದರೆ ಹೊರಗಡೆ ವಿರುದ್ಧವಾಗಿ ಹೇಳಿಕೆ ನೀಡುವ ಮೂಲಕ ನಾಡದೋಣಿ ಮೀನುಗಾರರಿಗೆ ಅನ್ಯಾಯ ಉಂಟು ಮಾಡುತ್ತಿದ್ದಾರೆ ಇದರಿಂದ ಮೀನುಗಾರರ ಬದುಕು ಬೀದಿಗೆ ಬರುತ್ತದೆ. ಅವೈಜ್ಞಾನಿಕ ಮೀನುಗಾರಿಕೆ ನಡೆಸುವುದು ನಿಲ್ಲುವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದರು.

ಸುದ್ದಿಗೋಷ್ಟಿಯಲ್ಲಿ ರಾಜ್ಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಯಶವಂತ ಖಾರ್ವಿ, ರಾಜ್ಯ ಒಕ್ಕೂಟದ ಉಪಾಧ್ಯಕ್ಷ ನಾಗೇಶ ಖಾರ್ವಿ, ಸದಸ್ಯರಾದ ರಾಮ ಖಾರ್ವಿ, ಚಂದ್ರ ಖಾರ್ವಿ ಉಪಸ್ಥಿತರಿದ್ದರು.

‘ಕರ್ನಾಟಕ ಕರಾವಳಿಯ ಮೂರು ಜಿಲ್ಲೆಯ ಮೀನುಗಾರರ ಸಂಘಟನೆಗಳು, ಮೀನುಗಾರಿಕಾ ಸಂಬಂಧ ಪಟ್ಟ ವಿಜ್ಞಾನಿಗಳು ಸಹಿತ ಹಲವರು ಬೆಳಕು ಮೀನುಗಾರಿಕೆ ಮತ್ತು ಬುಲ್ಟ್ರಾಲ್ ಮೀನುಗಾರಿಕೆ ಸಂಪೂರ್ಣವಾಗಿ ನಿಷೇಧ ಮಾಡದೇ ಇದ್ದರೆ ಮೀನುಗಾರಿಕೆ ಸಂಪೂರ್ಣವಾಗಿ ನಾಶವಾಗುತ್ತದೆ ಎಂದು ಹೇಳಿದ್ದಾರೆ. ನಮ್ಮ ಬೇಡಿಕೆಗೆ ಸರಕಾರ ಹಾಗೂ ಇಲಾಖೆಯಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಈ ವರ್ಷ ನವೆಂಬರ್ ತಿಂಗಳಿನಿಂದ ಬೆಳಕು ಮೀನುಗಾರಿಕೆ ಪ್ರಾರಂಭಿಸಲಾಗಿದೆ. ಮೀನುಗಾರರ ಬದುಕಿನ ಹಿತದೃಷ್ಟಿಯಿಂದ ಅವೈಜ್ಞಾನಿಕ ಮೀನುಗಾರಿಕೆ ತಡೆಯಲು ನಿತ್ಯ ಸಮುದ್ರಕ್ಕಿಳಿಯುವ ನಾವು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ’- ನಾಗೇಶ ಖಾರ್ವಿ, ಅಧ್ಯಕ್ಷರು, ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟ

Leave a Reply

Your email address will not be published. Required fields are marked *

error: Content is protected !!