ಮತ್ತೊಂದು ಖಾಸಗಿ ಬ್ಯಾಂಕ್ ನ ವಹಿವಾಟಿಗೆ ನಿರ್ಬಂಧ ಹೇರಿದ ಆರ್‌ಬಿಐ!
ಮುಂಬೈ: ದೇಶದ ಮತ್ತೊಂದು ಖಾಸಗಿ ಬ್ಯಾಂಕ್ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಬಂಧ ಹೇರಿದ್ದು, ಹಣ ವಿತ್ ಡ್ರಾಗೆ 25,000 ರೂ ಮಿತಿ ಹೇರಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಆರ್ ಬಿಐ, ‘ಲಕ್ಷ್ಮಿ ವಿಲಾಸ್ ಬ್ಯಾಂಕ್ ಮೇಲೆ ಸರ್ಕಾರವು ಒಂದು ತಿಂಗಳ ತಾತ್ಕಾಲಿಕ ನಿಷೇಧ ಹೇರಿದ್ದು, ಬ್ಯಾಂಕ್ ಖಾತೆದಾರರಿಗೆ ಹಣ ಹಿಂಪಡೆಯುವ ಗರಿಷ್ಠ ಮಿತಿಯನ್ನು 25,000 ರೂಗೆ ನಿಗದಿಪಡಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಸಲಹೆ ಮೇರೆಗೆ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಅಲ್ಲದೆ ಬ್ಯಾಂಕ್‌ನ ನಿರ್ದೇಶಕರ ಮಂಡಳಿಯನ್ನು ರದ್ದು ಪಡಿಸಲಾಗಿದ್ದು, ಕೆನರಾ ಬ್ಯಾಂಕ್‌ನ ಮಾಜಿ ನಾನ್–ಎಕ್ಸಿಕ್ಯುಟಿವ್ ಚೇರ್ಮನ್ ಟಿ.ಎನ್.ಮನೋಹರನ್ ಅವರನ್ನು ಬ್ಯಾಂಕ್‌ನ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಆರ್‌ಬಿಐ ಅನುಮತಿ ಇಲ್ಲದೆಯೇ ಯಾವುದೇ ಕಾರಣದಿಂದಲೂ ಲಕ್ಷ್ಮಿ ವಿಲಾಸ್ ಬ್ಯಾಂಕ್, 25 ಸಾವಿರ ರೂಪಾಯಿಗಿಂತ ಹೆಚ್ಚಿನ ಹಣವನ್ನು ಬ್ಯಾಂಕ್‌ನ ಗ್ರಾಹಕರಿಗೆ ನೀಡುವಂತಿಲ್ಲ ಎಂದು ಹೇಳಲಾಗಿದೆ.
ಲಕ್ಷ್ಮಿ ವಿಲಾಸ್ ಬ್ಯಾಂಕ್‌ನ ಹಣಕಾಸು ಪರಿಸ್ಥಿತಿ ಹದಗೆಡುತ್ತಿದ್ದ ಬೆನ್ನಲ್ಲೇ ಈ ನಿರ್ಧಾರಕ್ಕೆ ಬರಲಾಗಿದ್ದು, ಆರ್‌ಬಿಐ ಪ್ರಕಟಣೆಯಲ್ಲಿ ‘ಠೇವಣಿದಾರರ ಹಿತಾಸಕ್ತಿ ರಕ್ಷಿಸಲು, ಹಣಕಾಸು ಮತ್ತು ಬ್ಯಾಂಕಿಂಗ್ ವಲಯದ ಭದ್ರತೆಗಾಗಿ ಕೇಂದ್ರ ಸರ್ಕಾರದಿಂದ ತಾತ್ಕಾಲಿಕ ನಿರ್ಬಂಧ ಹೇರುವ ಹೊರತು ಬೇರೆ ಮಾರ್ಗಗಳು ಕಂಡು ಬಂದಿಲ್ಲ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949ರ ಸೆಕ್ಷನ್ 45ರ ಅಡಿಯಲ್ಲಿ ನಿರ್ಬಂಧ ವಿಧಿಸಲಾಗಿದೆ’ ಎಂದು ತಿಳಿಸಿದೆ.
ಆರ್‌ಬಿಐನ ಮನವಿಯನ್ನು ಪರಿಗಣಿಸಿರುವ ಕೇಂದ್ರ ಸರ್ಕಾರವು, 30 ದಿನಗಳ ವರೆಗೂ ಬ್ಯಾಂಕ್ ಮೇಲೆ ನಿರ್ಬಂಧ ವಿಧಿಸಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.