ಬೈರಂಪಳ್ಳಿ ಗ್ರಾಪಂನಲ್ಲಿ ನಡೆದ ಹಗರಣಗಳನ್ನು ಮುಚ್ಚಿಹಾಕಲು ಷಡ್ಯಂತ್ರ
ತನಿಖೆಯ ಹಾದಿ ತಪ್ಪಿಸಲು ಕಚೇರಿಗೆ ಬೀಗ ಜಡಿದು, ಸಿಬ್ಬಂದಿಗಳ ಸಾಮೂಹಿಕ ರಾಜೀನಾಮೆಯ ಹುನ್ನಾರ– ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ಬೈರಂಪಳ್ಳಿ ಆರೋಪ
ಉಡುಪಿ: ಬೈರಂಪಳ್ಳಿ ಗ್ರಾಪಂನಲ್ಲಿ ನಡೆದಿರುವ ಹಗರಣಗಳನ್ನು ಮರೆಮಾಚುವ ಉದ್ದೇಶದಿಂದ ಪಂಚಾಯತ್ ಕಚೇರಿಗೆ ಬೀಗ ಜಡಿದು, ಪಂಚಾಯತ್ ಸಿಬ್ಬಂದಿ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಹಗರಣಗಳ ತನಿಖೆಯ ಹಾದಿ ತಪ್ಪಿಸಿ ಭ್ರಷ್ಟಾಚಾರಿಗಳು, ಕಳ್ಳರು, ಭ್ರಷ್ಟ ಸಿಬ್ಬಂದಿ ಪಲಾಯನ ಮಾಡಲು ಪ್ರಯತ್ನಿಸಿರುವ ವಿಫಲ ಪ್ರಯತ್ನ ಇದಾಗಿದೆ ಎಂದು ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ಬೈರಂಪಳ್ಳಿ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಮಂದಿಯ ಸ್ವಾರ್ಥ ರಾಜಕಾರಣದಿಂದಾಗಿ ಸರಕಾರದ ಅನುದಾನಗಳು ಬಡ ಜನರಿಗೆ ಸಿಗದೆ ದುರುಪಯೋಗವಾಗುತ್ತಿದೆ. ಗುತ್ತಿಗೆದಾರರು, ಪಂಚಾಯತ್ ನ ಮಾಜಿ ಅಧ್ಯಕ್ಷರು, ಹಾಲಿ ಅಧ್ಯಕ್ಷರು, ಹಿಂದಿನ ಪಿಡಿಓ, ಸಿಬ್ಬಂದಿ, ಇಲಾಖಾ ಇಂಜಿನಿಯರ್ ಗಳು ಹಗರಣದಲ್ಲಿ ನೇರವಾಗಿ ಶಾಮೀಲಾಗಿದ್ದಾರೆ. ಹೀಗಾಗಿ ತನಿಖೆಯ ಹಾದಿ ತಪ್ಪಿಸುವ ಸಲುವಾಗಿ ಹಾಲಿ ಪಿಡಿಓ ಸುಮನಾ ಅವರನ್ನು ವರ್ಗಾವಣೆ ಮಾಡಲು ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ದೂರಿದರು.
ಡಿ. 31ರಂದು ಸಿಬ್ಬಂದಿಯೂ ಪಂಚಾಯತ್ ನ ಬೀಗವನ್ನು ಪಿಡಿಓ ಅವರಿಗೆ ನೀಡದೆ, ಅಧ್ಯಕ್ಷರಿಗೆ ನೀಡಿದ್ದಾರೆ. ಬೀಗದ ಕೀಯನ್ನು ಅಧ್ಯಕ್ಷರು ತನ್ನ ಮನೆಯಲ್ಲಿ ಇಟ್ಟುಕೊಂಡು, ಪಂಚಾಯತ್ ಸಿಬ್ಬಂದಿ ಬೀಗದ ಕೀ ಕೇಳಿದಾಗ ನೀಡಿಲ್ಲ. ಇದು ಸರಿಯಲ್ಲ. ಇದರಿಂದ ಗ್ರಾಮಸ್ಥರಿಗೂ ತೊಂದರೆ ಆಗಿದೆ ಎಂದರು.
ಪಂಚಾಯತ್ ನ ಭ್ರಷ್ಟಾಚಾರದ ವಿರುದ್ದದ ಹೋರಾಟ ಅಂತಿಮ ಹಂತಕ್ಕೆ ತಲುಪಿದ್ದು, ತನಿಖೆಗೆ ಆಗ್ರಹಿಸಿ 2024 ರ ಮಾ.15 ರಂದು ಮೂರನೇ ಬಾರಿಗೆ ದೂರು ಸಲ್ಲಿಸಿದ್ದೇನೆ. ಅದರಂತೆ ಜಿ.ಪಂ ಸಿಇಓ ತನಿಖಾ ತಂಡವನ್ನು ರಚಿಸಿ, ತನಿಖೆ ನಡೆಸಿ ವರದಿ ನೀಡಿದ್ದಾರೆ. ಲೂಟಿ ಹೊಡೆದಿರುವ ಹಣವನ್ನು ಮರುಪಾವತಿ ಮಾಡುವಂತೆ ಆದೇಶಿಸಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಅಮ್ಮಣ್ಣಿ ಶೆಟ್ಟಿ, ಸದಸ್ಯರಾದ ವಿಜಯ್ ಕುಮಾರ್, ವಿಜಯಶ್ರೀ ಭಟ್, ಉದಯ್ ಪೂಜಾರಿ, ಗ್ರಾಮಸ್ಥೆ ಅನಿತಾ ಪೂಜಾರಿ ಉಪಸ್ಥಿತರಿದ್ದರು.