ಕಾಂಗ್ರೆಸ್ ಪಕ್ಷ ಈಗ ಎಸ್‌ಡಿಪಿಐ ಅಡಿಯಾಳಾಗಿದೆ: ಗಂಟಿಹೊಳೆ
ಗಂಗೊಳ್ಳಿ: ಗ್ರಾಮ ಪಂಚಾಯತ್ ಕಚೇರಿಯ ಒಳಗೆ ಮೌಲ್ವಿಯನ್ನು ಕರೆಸಿ ನಮಾಜ್ ಮಾಡಿಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ಗಂಗೊಳ್ಳಿ ಇದರ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭಾಗಿಯಾಗಿ, ಕಾಂಗ್ರೆಸ್ ಮತ್ತು ಎಸ್‌ಡಿಪಿಐ ವಿರುದ್ಧ ಗುಡುಗಿದರು.
ಕಾಂಗ್ರೆಸ್ ಪಕ್ಷ ಒಂದು ಕಡೆ ಎಸ್‌ಡಿಪಿಐಯನ್ನು ನಿಷೇಧಿಸಬೇಕು ಎಂದು ವಾದಿಸುತ್ತಲೇ ಹಿಂಬಾಗಿಲಿನ ಮೂಲಕ ಒಪ್ಪಂದ ಮಾಡಿಕೊಂಡು ಅಧಿಕಾರ ಅನುಭವಿಸುತ್ತಿದೆ. ಕೇವಲ ಒಂದು ಪಂಚಾಯತ್ ಅಧಿಕಾರಕ್ಕಾಗಿ ಎಸ್‌ಡಿಪಿಐ ಜೊತೆ ಅನೈತಿಕ ಸಂಬಂಧ ಮಾಡಿಕೊಳ್ಳುವ ಮೂಲಕ ಸೈದ್ಧಾಂತಿಕತೆಯನ್ನು ಮಾರಾಟ ಮಾಡಿ ತನಗೆ ಅಧಿಕಾರ ಮಾತ್ರ ಮುಖ್ಯ ಎಂದು ಕಾಂಗ್ರೆಸ್ ತೋರಿಸಿಕೊಟ್ಟಿದೆ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.
ಬೈಂದೂರು ಕ್ಷೇತ್ರದಲ್ಲಿ ಕಳೆದ ಒಂದೂವರೆ ವರ್ಷದಿಂದ ಗೋ ಕಳ್ಳತನ ಪ್ರಕರಣಗಳು ತುಂಬಾ ದಾಖಲಾಗುತ್ತಿದೆ. ಗೋಕಳ್ಳತನದ ಹಿಂದೆ ಯಾರಿದ್ದಾರೆ ಎನ್ನುವುದು ಲೋಕಕ್ಕೆ ತಿಳಿದಿದೆ. ಇಂತವರಿಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಿ, ಅವರೊಂದಿಗೆ ಮೈತ್ರಿ ಮಾಡಿಕೊಂಡು ಗಂಗೊಳ್ಳಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಏರಿದೆ. ಅಷ್ಟಲ್ಲದೆ ಉಪಾಧ್ಯಕ್ಷನಿಗೆ ಸರ್ಕಾರಿ ಕಟ್ಟಡದಲ್ಲೇ, ಪಂಚಾಯತ್ತಿನ ಒಳಗೆ ಧಾರ್ಮಿಕ ಮುಖಂಡರನ್ನು ಕರೆಸಿ ನಮಾಜ್ ಮಾಡಿಸುವಷ್ಟು ಸ್ವಾತಂತ್ರ್ಯವನ್ನು ಕಾಂಗ್ರೆಸ್ ನೀಡಿದೆ. ಅಧಿಕಾರಕ್ಕಾಗಿ ತುಷ್ಟಿಕರಣದ ರಾಜಕೀಯ ಮಾಡುವುದನ್ನು ಹಿಂದೂ ಸಮಾಜ ಸಹಿಸುವುದಿಲ್ಲ ಎಂದರು.