ರಾ.ಹೆ ಸಾಣೂರಿಗೆ 1.6 ಕಿ.ಮೀ ಸರ್ವಿಸ್ ರಸ್ತೆ, ಹೈಟೆನ್ಶನ್ ಟವರ್ ಬಳಿ ತಡೆಗೋಡೆ- ಸಂಸದ ಕೋಟ ಭರವಸೆ
ಕಾರ್ಕಳ: ಕಳೆದ ಎರಡು ವರ್ಷಗಳಿಂದ ಸಾಣೂರು ರಾಷ್ಟ್ರೀಯ ಹೆದ್ದಾರಿ 169 ನಿರ್ಮಾಣ ಸಂದರ್ಭದಲ್ಲಿ ಸಾರ್ವಜನಿಕರಿಂದ ನಿರಂತರ ದೂರಿನ ಹಿನ್ನೆಲೆಯಲ್ಲಿ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಇಂದು ಸಾಣೂರು ಪುಲಕೇರಿ ಬೈಪಾಸ್ ಸರ್ಕಲ್‌ನಿಂದ ಮುರತಂಗಡಿ ಪದವಿ ಪೂರ್ವ ಕಾಲೇಜುವರೆಗೆ ಸುಮಾರು 4 ಕಿ.ಮೀ. ರಸ್ತೆ ಕಾಮಗಾರಿಯಿಂದ ಆಗುತ್ತಿರುವ ತೊಡಕುಗಳ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದರು.
ರಾ.ಹೆ. ಯೋಜನಾಧಿಕಾರಿ ಜಾವೇದ್ ಅಜ್ಮಿ, ಇಂಜಿನಿಯರ್ ನಾಸಿರ್, ದಿಲೀಪ್ ಬಿಲ್ಡ್ ಕಾನ್ ಜನರಲ್ ಮ್ಯಾನೇಜರ್ ವರದ ರಾವ್, ಕನ್ಸ್ಟ್ರಕ್ಷನ್ ಮ್ಯಾನೇಜರ್ ಬಾಲಾಜಿಯವರಿಗೆ ತುರ್ತು ಕಾಮಗಾರಿಗಳನ್ನು ಕೂಡಲೇ ಕೈಗೆತ್ತಿಕೊಂಡು ಪ್ರಯಾಣಿಕರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಅನುಮಾಡಿಕೊಡುವಂತೆ ನಿರ್ದೇಶನ ನೀಡಿದರು.
2ವಾರಗಳ ಹಿಂದೆ ಸಾಣೂರು ಯುವಕ ಮಂಡಲದ ಸದಸ್ಯರು, ಗ್ರಾಮ ಪಂಚಾಯತ್ ಆಡಳಿತ, ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಹಾಗೂ ಸ್ಥಳೀಯ ನಿವಾಸಿಗಳು ರಸ್ತೆಗಳಿದು ತಡೆಗೋಡೆ ನಿರ್ಮಾಣ ಕಾರ್ಯವನ್ನು 40 ಮೀ. ವಿಸ್ತರಿಸುವಂತೆ ಆಗ್ರಹಿಸಿ ಪ್ರತಿಭಟನೆಯನ್ನು ನಡೆಸಿದ್ದರು.
ಪ್ರತಿಭಟನಾಕಾರರ ಆಗ್ರಹಕ್ಕೆ ಮಣಿದು ಸಂಸದರು ಕೊಟ್ಟ ಮಾತಿನಂತೆ ಈ ದಿನ ಸ್ಥಳ ಪರಿಶೀಲನೆಗೆ ಆಗಮಿಸಿದ್ದರು.
ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ರವರು ಕಳೆದ ಎರಡು ವರ್ಷಗಳಿಂದ ಹಲವಾರು ಬಾರಿ ಸ್ಥಳ ಪರಿಶೀಲನೆ ನಡೆದು ಶಾಸಕರ, ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಪ್ರಗತಿ ಪರಿಶೀಲನ ಸಭೆ ನಡೆದರೂ ತೀರಾ ಅಗತ್ಯವಾದ 1. 6 ಕಿಲೋಮೀಟರ್ ಸರ್ವಿಸ್ ರಸ್ತೆಗೆ ಇನ್ನೂ ಪ್ರಸ್ತಾವನೆ ಸಲ್ಲಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ 12 ಅಡ್ಡ ರಸ್ತೆಗಳಲ್ಲಿ ಜಲ್ಲಿಕಲ್ಲು ಹಾಗೂ ಮರಳು ಹರಡಿದ್ದು, ವಾಹನ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಆತಂಕದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ.
ಮುಖ್ಯ ರಸ್ತೆಗೆ ಡಾಮರೀಕರಣ ನಡೆಯುತ್ತಿದ್ದರೂ, ಅಡ್ಡರಸ್ತೆಗೆ ಕನಿಷ್ಠ 50 ಮೀಟರ್ ಡಾಮರೀಕರಣ ಮಾಡದಿರುವ ಬಗ್ಗೆ ಸಚಿವರ ಗಮನ ಸೆಳೆದರು.
- ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಆರು ಕಡೆ ಹಳೆ ಬಸ್ಸು ನಿಲ್ದಾಣಗಳನ್ನು ಕೆಡವಿ, ರಸ್ತೆ ವಿಸ್ತರಣಾ ಕಾರ್ಯ ನಡೆಸಿದ್ದರೂ ಈವರೆಗೆ ಕನಿಷ್ಠ ತಾತ್ಕಾಲಿಕ ಬಸ್ಸು ತಂಗುದಾಣ ಕೂಡ ನಿರ್ಮಿಸದೆ ಹೊಸ ಬಸ್ಸು ತಂಗುದಾಣಗಳಿಗೆ ಜಾಗವನ್ನು ನಿಗದಿಪಡಿಸದೆ ತೀರಾ ನಿರ್ಲಕ್ಷ ತೋರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಣೂರು ಯುವಕ ಮಂಡಲದ ಮೈದಾನದ ತಡೆಗೋಡೆಯನ್ನು ಕೆಡವಿ ಹಾಕಲಾಗಿದ್ದು, ಇದೀಗ ಪಕ್ಕದಲ್ಲಿ 70 ಮೀಟರ್ ಉದ್ದಕ್ಕೆ ತಡೆಗೋಡೆ ನಿರ್ಮಾಣವಾಗಿದ್ದರೂ ಸುಮಾರು 40 ಮೀಟರ್ ಉದ್ದಕ್ಕೆ ತಡೆಗೋಡೆಯನ್ನು ನಿರ್ಮಾಣ ಮಾಡದೆ, ಸಾರ್ವಜನಿಕರ ಸುರಕ್ಷತೆಗೆ ಧಕ್ಕೆಯನ್ನು ತರಲಾಗಿದೆ ಎಂದು ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ಪ್ರಸಾದ್ ಪೂಜಾರಿ ಹಾಗೂ ಜಗದೀಶ್ ಶೆಟ್ಟಿಗಾರ್ ಸಚಿವರ ಬಳಿ ಕೂಡಲೇ ತಡೆಗೋಡೆ ವಿಸ್ತರಣೆಗೆ ಪ್ರಸ್ತಾವನೆ ಸಲ್ಲಿಸುವಂತೆ ಒತ್ತಾಯಿಸಿದರು.
ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ಯುವರಾಜ ಜೈನ್ ರವರು ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ಸಾಣೂರಿಗೆ ತೀರ ಅಗತ್ಯದ ರಸ್ತೆ ನಿರ್ಮಾಣ ಕಾಮಗಾರಿಗೆ ಸಚಿವರಿಗೆ ಮನವಿ ನೀಡಿದರು.
ಸಾಣೂರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುಚೇತ ಕಾಮತ್, ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಲೀನಾ, ಕಾಲೇಜು ಮತ್ತು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರುಗಳಾದ ಅಶೋಕ ಶೆಟ್ಟಿ ಮತ್ತು ಮಾಧವ ಭಂಡಾರ್ಕರ್ ಅವರು ವಿದ್ಯಾಸಂಸ್ಥೆಗೆ ದಿನನಿತ್ಯ 500 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಸಂಚರಿಸುವ ರಸ್ತೆಗೆ ಡಾಮರೀಕರಣ ಮಾಡದೆ, ಎತ್ತರದಲ್ಲಿರುವ ತಡೆಗೋಡೆ ಮೇಲೆ ಸುರಕ್ಷಿತ ಗ್ರಿಲ್ ಗಳನ್ನು ಅಳವಡಿಸದಿರುವ ಬಗ್ಗೆ ಸಚಿವರ ಗಮನ ಸೆಳೆದರು.
ಮುರತಂಗಡಿಯ ಸ್ಥಳೀಯ ನಿವಾಸಿ ಗಣೇಶ ಗುಡ್ಡ ಕಡಿತದ ಪರಿಣಾಮವಾಗಿ ಎತ್ತರದಲ್ಲಿರುವ ತಮ್ಮ ವಾಸದ ಮನೆ ಅಪಾಯಕಾರಿ ಸ್ಥಿತಿಯಲ್ಲಿರುವ ಬಗ್ಗೆ ಸಚಿವರ ಗಮನ ಸೆಳೆದಾಗ ಸ್ಥಳದಲ್ಲಿಯೇ ಸಚಿವರು ಬಾಲಾಜಿಯವರಿಗೆ ತುರ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶಿಸಿದರು.
ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆದ್ದಾರಿ ಸಮಸ್ಯೆಗಳ ಬಗ್ಗೆ ಗ್ರಾಮದ ಪ್ರಮುಖರ ಮತ್ತು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದ ಸಚಿವರು ಈ ಬಗ್ಗೆ ಹೆದ್ದಾರಿ ಇಲಾಖಾಧಿಕಾರಿಗಳು ಮತ್ತು ಗುತ್ತಿಗೆದಾರರ ಜೊತೆಗೆ ಸಮಾಲೋಚನೆ ನಡೆಸಿ ಅಗತ್ಯ ಪ್ರಸ್ತಾವನೆಗಳನ್ನು ಸಂಸದರ ಕಚೇರಿಗೆ ಕೂಡಲೇ ಕಳುಹಿಸಿಕೊಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಯಶೋಧ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಕರುಣಾಕರ ಕೋಟ್ಯಾನ್, ವಸಂತ, ಸರಸ್ವತಿ, ಸತೀಶ್, ಪ್ರಕಾಶ್ ರಾವ್, ಸುಮತಿ, ಮಾಜಿ ಜಿ.ಪಂ. ಸದಸ್ಯರಾದ ಉದಯ ಕೋಟ್ಯಾನ್, ಮಾಜಿ ತಾಪಂ ಸದಸ್ಯರಾದ ಪ್ರವೀಣ್ ಕೋಟ್ಯಾನ್, ಪ್ರಮುಖರಾದ ದೇವಾನಂದ ಶೆಟ್ಟಿ, ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.
ಮೀಯಾರು,ಮುಡಾರು,ಒಮಾಳ ಗ್ರಾಮಗಳ ಭೂಸ್ವಾಧೀನ ಸಮಸ್ಯೆಗಳ ಬಗ್ಗೆ ಸ್ಥಳೀಯ ಮುಖಂಡರುಗಳಾದ ರೆಂಜಾಳ ರಮೇಶ್ ಶೆಟ್ಟಿ, ಮಾಳ ಪದ್ಮನಾಭ ನಾಯ್ಕ, ಬಜಗೋಳಿ ಶಾಮ ಶೆಟ್ಟಿಯವರು ಸಚಿವರ ಗಮನ ಸೆಳೆದಾಗ ಕೂಡಲೇ ಇಂಜಿನಿಯರ್‌ಗೆ ಕರೆ ಮಾಡಿ ಜನರ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸುವಂತೆ ಸ್ಥಳದಲ್ಲಿ ನಿರ್ದೇಶಿಸಿದರು.
ಎರಡು ತಿಂಗಳ ಒಳಗೆ ಕಾರ್ಯ ಪ್ರಗತಿಯಲ್ಲಿರುವ ಡಾಮರೀಕರಣ ಕೆಲಸ ಕಾರ್ಯಗಳನ್ನು ಸಂಪೂರ್ಣ ಗೊಳಿಸಿ ಅಡ್ಡರಸ್ತೆಗಳಿಗೆ ಡಾಮರೀಕರಣ, ಹೊಸ ಬಸ್ಸು ತಂಗುದಾಣಗಳ ನಿರ್ಮಾಣ,ಬೀದಿ ದೀಪ ವ್ಯವಸ್ಥೆ ಯನ್ನು ಸಂಪೂರ್ಣಗೊಳಿಸುವಂತೆ ನಿರ್ದೇಶಿಸಿದರು.
ಸಾಣೂರು ನರಸಿಂಹ ಕಾಮತ್ ರವರು ಸಚಿವರಿಗೆ ಸಾಣೂರಿನ ಗಡಿ ಪ್ರದೇಶ ಚಿಲಿಂಬಿ ಗುಡ್ಡದ ಪರಿಸರವ ನ್ನು ತೋರಿಸಿ ಸುಮಾರು 1.5 ಕಿಮೀ. ಉದ್ದ ಅರಣ್ಯ ಇಲಾಖೆಯ ಅನುಮತಿ ಸಿಗದೆ, ರಸ್ತೆ ನಿರ್ಮಾಣ ಕಾರ್ಯ ಪ್ರಾರಂಭವಾಗದೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ವಿಳಂಬವಾಗುತ್ತಿರುವ ಬಗ್ಗೆ ಗಮನ ಸೆಳೆದರು.
ಈ ಬಗ್ಗೆ ಅರಣ್ಯ ಇಲಾಖೆಯಿಂದ ಎದುರಾಗುತ್ತಿರುವ ತೊಡಕುಗಳ ಬಗ್ಗೆ ತುರ್ತು ಗಮನಹರಿಸಿ, ಸಮಸ್ಯೆಯ ನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.