ಪಂಚಾಯತ್‌ನ ಅಧಿಕಾರಿಯಿಂದ ಕಿರುಕುಳ- ಸಿಬ್ಬಂದಿಗಳ ಸಾಮೂಹಿಕ ರಾಜೀನಾಮೆ!
ಉಡುಪಿ: ಪಂಚಾಯತ್‌ನ ಅಧಿಕಾರಿಯು ಸಿಬ್ಬಂದಿಗಳಿಗೆ ನಿರಂತರ ಕಿರುಕುಳ ನೀಡುತ್ತಿರುವ ಕಾರಣಕ್ಕೆ ಉಡುಪಿ ತಾಲೂಕಿನ 23ನೇ ಬೈರಂಪಳ್ಳಿ ಗ್ರಾಮ ಪಂಚಾಯತ್ ನ ಬಾಗಿಲು ತೆರೆಯದ ಕಾರಣ ನಿತ್ಯದ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಉಂಟಾಯಿತು.
ಡಿ. 19ರ ಗುರುವಾರ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಕಚೇರಿಯಲ್ಲಿ ಕೆಲಸದ ಒತ್ತಡ, ಅಧಿಕಾರಿಯ ಮಾನಸಿಕ ಕಿರುಕುಳದಿಂದ ಕಾರ್ಯನಿರ್ವಹಿಸಲು ಸಂಕಷ್ಟವಾಗುತ್ತಿದ್ದು, ಆರೋಗ್ಯದ ದೃಷ್ಟಿಯಿಂದ ರಾಜೀನಾಮೆ ನೀಡುತ್ತಿದ್ದೇವೆ ಎಂದು ಪತ್ರ ಸಲ್ಲಿಸಿದ್ದರು.
ಈ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷ, ಮೇಲಾಧಿಕಾರಿಗಳಿಗೆ ಪತ್ರದ ಮೂಲಕ ಮಾಹಿತಿ ನೀಡಿದ್ದರೂ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಜ.1ರ ಬುಧವಾರ ಸಿಬ್ಬಂದಿ ಗ್ರಾಮ ಪಂಚಾಯತ್ ಕಚೇರಿಗೆ ಹಾಜರಾಗಿಲ್ಲ.
ಸಿಬ್ಬಂದಿಗಳ ರಾಜೀನಾಮೆ ವಿಷಯ ತಿಳಿಯದೆ ತಮ್ಮ ಕೆಲಸಕ್ಕಾಗಿ ಗ್ರಾಮ ಪಂಚಾಯತ್ ಕಚೇರಿಗೆ ಬಂದು ಸಾರ್ವಜನಿಕರು ಪರದಾಟ ನಡೆಸಿದರು. ಬಾಗಿಲಿಗೆ ಬೀಗ ಹಾಕಿರುವುದು ಕಂಡು ವಾಪಸ್ ಹೋದರು. ಆಕ್ರೋಶಗೊಂಡ ಗ್ರಾಮಸ್ಥನೋರ್ವ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಉಡುಪಿ ಜಿಲ್ಲಾಡಳಿತಕ್ಕೆ ತೀವ್ರ ಮುಜುಗರ ಉಂಟಾಗಿದೆ.
ಕೂಡಲೇ ಗ್ರಾಮ ಪಂಚಾಯತ್ ಕಚೇರಿಗೆ ತಾಲೂಕು ಮುಖ್ಯಕಾರ್ಯನಿರ್ವಹಣಾಧಿಕಾರಿ ದೌಡಾಯಿಸಿದರು. ಕಚೇರಿಯ ಬಾಗಿಲು ತೆರೆದು ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಕ್ರಮ ವಹಿಸಿದರು. ಆದರೆ ಕಚೇರಿ ತೆರೆದರೂ ಸಿಬ್ಬಂದಿಗಳಿಲ್ಲದೆ ಗ್ರಾಮಸ್ಥರು ಸೇವೆಯಿಂದ ವಂಚಿತರಾದರು. ಯಾವುದೇ ಮಾಹಿತಿ ನೀಡದೆ ಕಚೇರಿ ಬಾಗಿಲು ತೆರೆಯದೆ ಇರುವುದನ್ನು ಕಂಡ ಸಾರ್ವಜನಿಕರು ಪಂಚಾಯತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.