ಜ.5ರಿಂದ 23ನೇ ವರ್ಷದ ಕೆಮ್ತೂರು ದೊಡ್ಡಣ್ಣ ಶೆಟ್ಟಿ ನೆನಪಿನ ತುಳು ನಾಟಕ ಸ್ಪರ್ಧೆ

ಉಡುಪಿ: ತುಳುಕೂಟ ಉಡುಪಿ ಸಂಸ್ಥೆಯ ವತಿಯಿಂದ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ 23ನೇ ವರ್ಷದ ದಿ. ಕೆಮ್ತೂರು ದೊಡ್ಡಣ್ಣ ಶೆಟ್ಟಿ ನೆನಪಿನ ತುಳು ನಾಟಕ ಸ್ಪರ್ಧೆಯು ಇದೇ ಜನವರಿ 5ರಿಂದ 10ರ ವರೆಗೆ ಉಡುಪಿ ಎಂ.ಜಿ.ಎಂ.ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ತುಳುಕೂಟ ಉಡುಪಿ ಇದರ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದೇಶದ ಯಾವುದೇ ಪ್ರದೇಶದ ಯೋಗ್ಯ ತುಳು ಹವ್ಯಾಸಿ ನಾಟಕ ತಂಡಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಈ ಬಾರಿ ವಿವಿಧ 6 ಪ್ರಸಿದ್ಧ ತಂಡಗಳಿಗೆ ಅವಕಾಶ ನೀಡಲಾಗಿದೆ. ಜ. 5ರಂದು ಸಂಜೆ 5 ಗಂಟೆಗೆ ಶಾಸಕ ಯಶ್‌ಪಾಲ್ ಎ. ಸುವರ್ಣ ಅವರು ನಾಟಕ ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಮಣಿಪಾಲ ಎಚ್‌ಪಿಆ‌ರ್ ಸಮೂಹ ಸಂಸ್ಥೆಯ ಅಧ್ಯಕ್ಷ ಹರಿಪ್ರಸಾದ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಕಲಾವಿದರಿಂದ ‘ತುದೆದಾಂಟಿ ಬೊಕ್ಕ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.

ಜ. 6ರಂದು ಮಲ್ಪೆ ಕರಾವಳಿ ಕಲಾವಿದರಿಂದ ‘ಪೆರ್ಗ’, ಜ.7ರಂದು ಪಟ್ಲ ಭೂಮಿಗೀತ ಸಾಂಸ್ಕೃತಿಕ ವೇದಿಕೆಯಿಂದ ‘ದಿ ಫೈಯರ್’, ಜ.8ರಂದು ಸುಮನಸಾ‌ ಕೊಡವೂರು ಕಲಾವಿದರಿಂದ ‘ಈದಿ’, ಜ.9ರಂದು ಮುಂಬೈ ರಂಗಮಿಲನ ತಂಡದಿಂದ ‘ಸೋಕ್ರಟಿಸ್’ ಹಾಗೂ ಜ.10 ರಂದು ಭೂಮಿಕಾ ಹಾರಾಡಿ ತಂಡದಿಂದ ‘ಪೊರ್ತು ಕಂತಿನೆಡ್ಜ್ ಪೊರ್ತು ಉದಿಪುನೇಟ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು‌ ತಿಳಿಸಿದರು.

ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆಯುವ ತಂಡಗಳಿಗೆ ಕ್ರಮವಾಗಿ 20 ಸಾವಿರ, 15 ಸಾವಿರ ಹಾಗೂ 10 ಸಾವಿರ ನಗದು ಬಹುಮಾನ ನೀಡಲಾಗುವುದು. ಹಾಗೆಯೇ ನಿರ್ದೇಶನ, ಸಂಗೀತ, ರಂಗವಿನ್ಯಾಸ, ಬೆಳಕು, ನಟ, ನಟಿ ವಿಭಾಗಗಳಲ್ಲಿ ಪ್ರಥಮ 1 ಸಾವಿರ ಮತ್ತು ದ್ವಿತೀಯ, ತೃತೀಯ ಬಹುಮಾನ ನೀಡಲಾಗುವುದು.

ಸ್ಪರ್ಧೆಗೆ ಆಯ್ಕೆಯಾದ ರಾಜ್ಯದೊಳಗಿನ ತಂಡಗಳಿಗೆ 5 ಸಾವಿರ ಹಾಗೂ ಹೊರರಾಜ್ಯದ ತಂಡಗಳಿಗೆ 10 ಸಾವಿರ ಭತ್ಯೆಯೊಂದಿಗೆ ಊಟ ಉಪಚಾರ ಮತ್ತು ಉತ್ತಮ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಗಂಗಾಧರ ಕಿದಿಯೂರು, ನಾಟಕ ಸ್ಪರ್ಧೆಯ ಸಂಚಾಲಕ ಬಿ. ಪ್ರಭಾಕರ ಭಂಡಾರಿ, ಉಪಾಧ್ಯಕ್ಷ ದಿವಾಕರ್ ಸನಿಲ್, ಮಾಧ್ಯಮ ಸಂಚಾಲಕಿ ಭಾರತಿ ಟಿ.ಕೆ, ಯಶೋದ ಕೇಶವ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!