ಸಮಾರಂಭಗಳಿಗೆ 50 ಜನರ ಮಿತಿ – ಮಾರುಕಟ್ಟೆ ಲಾಕ್‌ಡೌನ್‌ ಜಾರಿಗೆ ಅನುಮತಿ ಕೋರಿದ ದೆಹಲಿ ಸರ್ಕಾರ

ನವದೆಹಲಿ: ದೆಹಲಿಯಲ್ಲಿ ಕೊರೊನಾ ಸೋಂಕು ಏರುತ್ತಿರುವ ಹಿನ್ನೆಲೆಯಲ್ಲಿ, ಮದುವೆ ಮತ್ತಿತರ ಸಮಾರಂಭಗಳಿಗೆ 200 ಮಂದಿ ಅತಿಥಿಗಳಿಗೆ ಸೇರಲು ಅವಕಾಶ ನೀಡಿದ್ದ ಆದೇಶವನ್ನು ಹಿಂಪಡೆಯಲು ನಿರ್ಧರಿಸಿರುವ ದೆಹಲಿ ಸರ್ಕಾರ, ಕೊರೊನಾ ಹಾಟ್‌ಸ್ಪಾಟ್‌ಗಳಾಗಿ ಪರಿವರ್ತನೆಯಾಗಬಹುದಾದ ಮಾರುಕಟ್ಟೆ ಪ್ರದೇಶಗಳಲ್ಲಿ ಲಾಕ್‌ಡೌನ್‌ ಜಾರಿಗೊಳಿಸಲು ಅಧಿಕಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ಮುಂದಾಗಿದೆ.

ಮಂಗಳವಾರ ಈ ಕುರಿತು ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ‘ಈ ಪ್ರಸ್ತಾವನೆಯನ್ನು ಅನುಮೋದನೆಗಾಗಿ ಲೆಫ್ಟಿನೆಂಟ್ ಗವರ್ನರ್ ಅನಿಲ್‌ ಬೈಜಲ್ ಅವರಿಗೆ ಕಳುಹಿಸಲಾಗಿದೆ. ಮದುವೆ ಮತ್ತಿತರ ಸಮಾರಂಭಕ್ಕೆ 200 ಅತಿಥಿಗಳ ಬದಲು 50 ಅತಿಥಿಗಳು ಭಾಗವಹಿಸಲು ಅವಕಾಶ ಕಲ್ಪಿಸುವಂತೆ ಪ್ರಸ್ತಾವನೆಯಲ್ಲಿ ಮನವಿ ಮಾಡಲಾಗಿದೆ‘ ಎಂದು ಹೇಳಿದರು.

ಕೊರೊನಾ ಹಾಟ್‌ಸ್ಪಾಟ್‌ಗಳಾಗಬಹುದಾದ ಮಾರುಕಟ್ಟೆ ತಾಣಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲು ಅನುಮತಿ ನೀಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುತ್ತಿರುವುದಾಗಿ ಕೇಜ್ರಿವಾಲ್ ಹೇಳಿದರು.

‘ಕೇಂದ್ರದ ನಿರ್ದೇಶನಗಳು ಮತ್ತು ಮಾರ್ಗಸೂಚಿಗಳ ಪ್ರಕಾರ, ಕೊರೋನವೈರಸ್ ಪ್ರಕರಣಗಳ ಸಂಖ್ಯೆ ಕಡಿಮೆಯಾದ ಕಾರಣ ವಿವಾಹ ಮತ್ತಿತರ ಕಾರ್ಯಕ್ರಮಗಳಲ್ಲಿ 200 ಮಂದಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಈಗ ಸೋಂಕಿನ ಪ್ರಮಾಣ ಏರುತ್ತಿರುವುದರಿಂದ ಅತಿಥಿಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ‘ ಎಂದು ಹೇಳಿದರು.

‘ದೀಪಾವಳಿ ಹಬ್ಬದ ಸಮಯದಲ್ಲಿ ರಾಜಧಾನಿಯ ಮಾರುಕಟ್ಟೆ ಸೇರಿದಂತೆ ಹಲವು ಕಡೆಗಳಲ್ಲಿ ಜನರು ಮಾಸ್ಕ್‌ ಧರಿಸದೇ, ವ್ಯಕ್ತಿಗತ ಅಂತರ ಕಾಯ್ದುಕೊಳ್ಳದೇ ಓಡಾಡುತ್ತಿದ್ದದು ಕಂಡುಬಂದಿತ್ತು. ಮಾರ್ಗಸೂಚಿ ನಿಯಮಗಳನ್ನು ಉಲ್ಲಂಘಿಸಿರುವ ಇಂಥ ಕಡೆಗಳಲ್ಲಿ ಕೊರೊನಾ ಸೋಂಕು ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಮಾರುಕಟ್ಟೆ ಪ್ರದೇಶಗಳ್ಲಲಿ ಲಾಕ್‌ಡೌನ್ ಜಾರಿಗೊಳಿಸಬೇಕಾದ ಅನಿವಾರ್ಯವಿದೆ‘ ಎಂದು ಅವರು ಅಭಿಪ್ರಾಯಪಟ್ಟರು

Leave a Reply

Your email address will not be published. Required fields are marked *

error: Content is protected !!