ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ

ಬೆಂಗಳೂರು: ವಿಧಾನ ಪರಿಷತ್ತಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಬಗ್ಗೆ ಬಿಜೆಪಿ ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಆಕ್ಷೇಪಾರ್ಹ ಪದ ಬಳಕೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರ ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಿದ್ದು, ಎಂಎಲ್‌ಸಿ ಸಿ.ಟಿ.ರವಿಯವರು ನನ್ನ ಬಗ್ಗೆ ಅವಾಚ್ಯ ಶಬ್ದ ಬಳಸಿಲ್ಲವೆಂದಾದರೆ ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಿಗೆ ಬಂದು ಆಣೆ ಪ್ರಮಾಣ ಮಾಡಲಿ ನೋಡೋಣ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸವಾಲು ಹಾಕಿದ್ದಾರೆ.

ಮಾಧ್ಯಮಗಳಿಗೆ ನೀಡಿದ ಸಂದರ್ಶನ ವೇಳೆ ಮಾತನಾಡಿ  ಬೆಳಗಾವಿ ಸುವರ್ಣಸೌಧದ ಪರಿಷತ್‌ ಕಲಾಪದಲ್ಲಿ ಸಿ.ಟಿ ರವಿಯವರು ಅಸಾಂವಿಧಾನಿಕ ಪದ ಬಳಸಿ ನಿಂದಿಸಿದ್ದಾರೆ ಎಂದು ನಾನು ನಾಟಕ ಮಾಡೋದಕ್ಕೆ ಆಗುತ್ತಾ? ಸದನದಲ್ಲಿ ನಿಂತು ಸುಳ್ಳು ಆರೋಪ ಮಾಡೋದಕ್ಕೆ ಆಗುತ್ತಾ? ಸುಳ್ಳು ಹೇಳೋದಕ್ಕೆ ನನಗೇನು ಹುಚ್ಚಾ? ನಾಟಕವಾಡಿ ರಾಜಕಾರಣದಲ್ಲಿ ನಾನು ಏನಾದ್ರೂ ಗಳಿಸೋದು ಇದ್ಯಾ? ಎಂದು ಲಕ್ಷ್ಮೀ ಹೆಬ್ಬಾಳ್ಕರ್  ಪ್ರಶ್ನಿಸಿದರು.

ರಾಮಾಯಣ, ಮಹಾಭಾರತ ಆಗಿದ್ದು, ಮಹಿಳೆಯನ್ನು ಅಪಮಾನ ಮಾಡಿದ್ದಕ್ಕೆ. ಅಲ್ಲಿ ಅಪಮಾನ ಮಾಡಿದ ಎಲ್ಲರಿಗೂ ಶಿಕ್ಷೆ ಆಗಿದೆ. ಇಲ್ಲಿಯೂ ಆಗುತ್ತೆ. ಸಿ.ಟಿ ರವಿ ಅವರು ಆ ರೀತಿ ಹೇಳಿಲ್ಲ ಅನ್ನೋದಾದ್ರೆ, ಧರ್ಮಸ್ಥಳಕ್ಕೆ ಬಂದು ಆಣೆ, ಪ್ರಮಾಣ ಮಾಡಲಿ. ಆಣೆ ಮಾಡಲಿಕ್ಕೆ ನಾನೂ ನನ್ನ ಕುಟುಂಬ ಸಮೇತವಾಗಿ ನಾನು ಬರ್ತೀನಿ ಎಂದು ಆಗ್ರಹಿಸಿದರು.

ಆಡಿಯೋ, ವಿಡಿಯೋ ಎಲ್ಲವೂ ನನ್ನತ್ರ ಸಾಕ್ಷಿ ಇದೆ: 
ʻಫ್ರೆಟ್ಟ್ರೇಟ್‌ʼ ಎಂದು ಉಚ್ಚಾರ ಮಾಡಿರುವುದಾಗಿ ಸಿ.ಟಿ ರವಿ ಹೇಳ್ತಾರಲ್ಲಾ ಎಂಬ ಪ್ರಶ್ನೆಗೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಫ್ರಸ್ಟ್ರೇಟ್‌ ಅನ್ನೋದಕ್ಕೂ ಆ ಪದಕ್ಕೂ ವ್ಯತ್ಯಾಸ ಇರಲ್ವಾ? ಅವರು ಹೇಳಿರೋದಕ್ಕೆ ಆಡಿಯೋ, ವಿಡಿಯೋ ಎಲ್ಲವೂ ನನ್ನತ್ರ ಸಾಕ್ಷಿ ಇದೆ. ಲಕ್ಷ್ಮೀ ಹೆಬ್ಬಾಳ್ಕರ್‌ ಸಂಪುಟದಲ್ಲಿರುವ ಏಕೈಕ ಮಹಿಳಾ ಸಚಿವೆ, ಸಾವಿರಾರು ಮಂದಿ ರಾಜಕಾರಣಕ್ಕೆ ಬರಲು ಮುಂದಾಗಿದ್ದಾರೆ. ಈಗ ಹೋರಾಟ ಮಾಡಲಿಲ್ಲ ಅಂದ್ರೆ, ನನ್ನ ಆತ್ಮಸಾಕ್ಷಿಗೆ ವಂಚನೆ ಮಾಡಿದಂತೆ ಆಗುತ್ತದೆ. ನಾನು ಸಂಘರ್ಷ ಅಪಮಾನ ಮೆಟ್ಟಿನಿಂತು ಬೆಳೆದಿದ್ದೇನೆ. ಆದರೆ ಈ ಘಟನೆಯಿಂದ ನನ್ನ ಮನಸ್ಸಿಗೆ ಆಘಾತ ಉಂಟಾಗಿದೆ ಎಂದರು.

ʻಕೊಲೆಗಾರʼ ಎನ್ನುವಂತಹ ಪ್ರಶ್ನೆ ಯಾಕೆ ಬಂತು ಎಂದು ಕೇಳಿದಾಗ ಸಿ.ಟಿ ರವಿ ಆಕ್ಸಿಡೆಂಟ್‌ ಮಾಡಿರುವ ವೀಡಿಯೋ ನನ್ನ ಬಳಿಯಿದೆ. ನಾನು ʻಕೊಲೆಗಾರʼ ಅಂದಿಲ್ಲ ಅಂತ ಹೇಳ್ತಿಲ್ಲ.. ಅವರ ಹಾಗೆ ನನಗೆ ಚಪಲಾನಾ, ಪ್ರತಿಯೊಂದಕ್ಕೆ ಎದ್ದು ನಿಂತು ಮಾತಾಡೋದಕ್ಕೆ ನಾನು ಗಾಂಧಿ ಹಾಕಿಕೊಟ್ಟಂತಹ ಮಾರ್ಗದಲ್ಲಿ ನಡೆಯುತ್ತಿರುವವಳು, ಗೋಡ್ಸೆ ಮಾರ್ಗದಲ್ಲಿ ನಡೆಯುವಂತಹವರಲ್ಲ ಎಂದರು.

ಆ ರೀತಿಯ ಯಾವುದೇ ವಿಡಿಯೋ ಇಲ್ಲ, ಅದು ನಕಲಿ ಎಂಬ ಸಭಾಪತಿಗಳ ಹೇಳಿಕೆ ಕುರಿತು ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್‌, ಸುಮಾರು ಸಂದರ್ಭದಲ್ಲಿ ನನಗೆ ಮಾರ್ಗದರ್ಶನ ಕೊಟ್ಟವರು ಸಭಾಪತಿಯವರು. ನನಗೆ ಫೋನ್ ಮಾಡಿ ಸಾಂತ್ವನ ಹೇಳಿದ್ದಾರೆ. ಅವರು ಯಾಕೆ ಈ ರೀತಿ ಹೇಳಿದ್ದಾರೋ ನನಗೆ ಗೊತ್ತಿಲ್ಲ, ಅವರ ರೂಲಿಂಗ್ ಬಗ್ಗೆ ಮಾತಾಡುವಷ್ಟು ಹಿರಿಯಳೂ ನಾನಲ್ಲ ಎಂದು ಸ್ಪಷ್ಟಪಡಿಸಿದರು.

ಚಿಕ್ಕಮಗಳೂರು: ಪ್ರಕರಣ ತನಿಖೆ ಹಂತದಲ್ಲಿದೆ. ಪೊಲೀಸ್‌ ಕೇಸ್‌ ಆದ ಮೇಲೆ ಎಲ್ಲವೂ ಅಪ್ರಸ್ತುತ. ಕೇಸ್‌ ಆಗುವ ಮೊದಲೇ ಆಣೆ- ಪ್ರಮಾಣದ ಬಗ್ಗೆ ಮಾತನಾಡಬಹುದಿತ್ತು. ಈಗೆಲ್ಲ ಅದು ಮುಗಿದ ಕಥೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿ, ಅವರು ನನ್ನನ್ನು ಕೊಲೆಗಡುಕ ಎಂದು ಕರೆದಿದ್ದಾರೆ. ನಾನು ಯಾರನ್ನು ಕೊಲೆ ಮಾಡಿದ್ದೇನೆ. ನನ್ನ ಮೇಲೆ ಕೆಸರು ಬಿದ್ದರೂ, ಕೆಸರಿನ ಮೇಲೆ ನಾನು ಬಿದ್ದರೂ ನಾನೇ ಸ್ನಾನ ಮಾಡಬೇಕು. ಹೀಗಾಗಿ ದೊಡ್ಡವರು ಕೆಸರಿನಿಂದ ನೀನೆ ಸ್ವಲ್ಪ ದೂರ ಇದ್ದು ಬಿಡು ಎಂದಿದ್ದಾರೆ. ಬೀದಿಯಲ್ಲಿ ಇದ್ದವರನ್ನು ಪೊಲೀಸ್‌ ಠಾಣೆಗೆ ಕರೆದೊಯ್ದು ರಕ್ಷಣೆ ನೀಡುತ್ತಾರೆ. ಪೊಲೀಸ್‌ ಠಾಣೆಯಲ್ಲಿ ಇದ್ದವರನ್ನು ಬೀದಿಗೆ ಕರೆತಂದು ರಕ್ಷಣೆ ಕೊಡಲು ಹೋಗಲ್ಲ ಎಂದರು.

ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆ ಮಾಡುವುದಾದರೆ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಮತ್ತು ಅವರ ನಿರ್ದೇಶನದಲ್ಲಿ ನಡೆಯಲಿ. ನಿಷ್ಪಕ್ಷಪಾತ ತನಿಖೆ ಪೊಲೀಸ್‌ ಪೇದೆ ಕೂಡ ಮಾಡುತ್ತಾನೆ. ಒತ್ತಡ ಇದ್ದರೆ ಏನು ಮಾಡುತ್ತಾರೆ. ಒತ್ತಡ ಇಲ್ಲದಿದ್ದರೆ ಹಿರೇಬಾಗೇವಾಡಿ ಪೊಲೀಸರೇ ಒಳ್ಳೇ ತನಿಖೆ ಮಾಡಬಹುದು. ಒತ್ತಡ ಇರುವ ಕಾರಣ ಹೈಕೋರ್ಟ್‌ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸಿಐಡಿ ತನಿಖೆ ಮಾಡಲಿ ಎಂದು ಪರಿಷತ್‌ ಸದಸ್ಯ ಸಿ.ಟಿ.ರವಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!