ಉಡುಪಿ: ಶಂಕರಾಚಾರ್ಯರಿಗೆ ಅವಹೇಳನ- ಶಿಷ್ಯ ವರ್ಗದಿಂದ ಖಂಡನೆ

ಉಡುಪಿ, ಡಿ.25: ಜಗದ್ಗುರು ಶ್ರೀಶಂಕರಾಚಾರ‌್ಯರ ಬಗ್ಗೆ ಕಾಶಿಮಠದ ಸಂಯಮೀಂದ್ರತೀರ್ಥ ಸ್ವಾಮೀಜಿ ಪ್ರವಚನ ವೊಂದರಲ್ಲಿ ಅವಹೇಳನಕಾರಿ ಯಾಗಿ ಮಾತನಾಡಿರುವುದನ್ನು ಖಂಡಿಸಿರುವ ಶಂಕರಾಚಾರ‌್ಯರ ಶಿಷ್ಯವೃಂದ, ಅವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ.

ಉಡುಪಿ ಕುಂಜಿಬೆಟ್ಟು ಶ್ರೀಶಾರದಾ ಮಂಟದಲ್ಲಿ ಶೃಂಗೇರಿ ಮಠದ ಪ್ರಾಂತೀಯ ಧರ್ಮಾಧಿಕಾರಿ ವಾಗೀಶ್ವರ ಶಾಸ್ತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಕ್ಕೊರೊಳ ಈ ನಿರ್ಧಾರ ತೆಗೆದುಕೊಳ್ಳಲಾಯಿತು.

ಗೌಡಸಾರಸ್ವತ ಸಮಾಜದ ಕಾಶಿಮಠದ ಸಂಯಮೀಂದ್ರತೀರ್ಥ ಸ್ವಾಮೀಜಿ ಶಂಕರಾಚಾರ್ಯರ ಕುರಿತು ಅವಹೇಳನ ಕಾರಿಯಾಗಿ ಮಾತನಾಡಿರುವುದು ಬೇಸರ ತಂದಿದೆ. ವಿವೇಕ ವೈರಾಗ್ಯಸಂಪನ್ನರಾಗಿ ಯತಿಧರ್ಮ ಪಾಲಿಸಬೇಕಾದ ಸ್ವಾಮೀಜಿ, ತಮಗಿಂತ ಸಾವಿರಾರು ವರ್ಷಗಳ ಪೂರ್ವದಲ್ಲಿ ಸಾರ್ಥಕವಾಗಿ ಸಮಗ್ರ ಹಿಂದೂ ಸಮಾಜಕ್ಕೇ ಮಾರ್ಗ ದರ್ಶನ ಮಾಡಿದ ಮಹಾತ್ಮರನ್ನು ಕೇವಲವಾಗಿ ಕಂಡು ಅದನ್ನೇ ಶಿಷ್ಯರಿಗೂ ತಿಳಿಸುವ ಅಲ್ಪಮತಿಯ ಪ್ರಯತ್ನ ಮಾಡಿರುವುದು ಬಹಳ ಬೇಸರ ಹಾಗೂ ನೋವುಂಟುಮಾಡಿದೆ ಎಂದು ವಾಗೀಶ್ವರ ಶಾಸ್ತ್ರಿ ತಿಳಿಸಿದರು.

ತಮ್ಮ ಮತಾಚಾರ್ಯರ ತತ್ವಗಳನ್ನು ತಿಳಿಸುವ ಸಂದರ್ಭದಲ್ಲಿ ಅನವಶ್ಯಕವಾಗಿ ಶಂಕರರನ್ನು ಉಲ್ಲೇಖಿಸಿ ಅಪವ್ಯಾಖ್ಯಾನ ಮಾಡಿರುವುದು ಖಂಡನೀಯ. ಇನ್ನು ಮುಂದೆ ಇಂಥ ಯತ್ನಗಳನ್ನು ಅವರಾಗಲೀ ಇತರರಾಗಲೀ ಮಾಡುವುದನ್ನು ಸಹಿಸಲಾಗದು ಎಂದರು.

ಸಭೆಯಲ್ಲಿ ಸ್ಥಾನಿಕ ಬ್ರಾಹ್ಮಣ ಮಹಾಮಂಡಲ ಮಂಗಳೂರು, ಸ್ಥಾನಿಕ ಬ್ರಾಹ್ಮಣ ಸಂಘ ಉಡುಪಿ, ಕರಾಡ ಬ್ರಾಹ್ಮಣ ಸಮಾಜ, ಚಿತ್ಪಾವನ ಬ್ರಾಹ್ಮಣ ಸಮಾಜ, ಹವ್ಯಕ ಬ್ರಾಹ್ಮಣ ಸಮಾಜ, ಅಶ್ವತ್ಥಪುರ ದೇಶಸ್ಥ ಬ್ರಾಹ್ಮಣ ಸಮಾಜ, ಕುಡಾಲ ದೇಶಸ್ಥ ಆದ್ಯಗೌಡ ಬ್ರಾಹ್ಮಣ ಸಮಾಜ, ಪದ್ಮಶಾಲಿ ಶೆಟ್ಟಿಗಾರ ಸಮಾಜ, ರಾಜಾಪುರಿ ಸಾರಸ್ವತ ಸಮಾಜ, ರಾಮ ಕ್ಷತ್ರಿಯ ಸಮಾಜ, ಮರಾಠಿ ಸಮಾಜ ಸೇವಾಸಂಘ, ಕೊಂಕಣಿ ಖಾರ್ವಿ ಸಮಾಜ, ಮರಾಠ ಕ್ಷತ್ರಿಯ ಸಮಾಜದ ಪ್ರಮುಖರು ಇದ್ದರು.

Leave a Reply

Your email address will not be published. Required fields are marked *

error: Content is protected !!