ಸಂವಿಧಾನ, ಬುದ್ಧ ಚಿಂತನೆಯನ್ನು ಹಂತಹಂತವಾಗಿ ನಾಶ ಮಾಡುವ ಉದ್ದೇಶ- ಜಯನ್ ಮಲ್ಪೆ

ಉಡುಪಿ, ಡಿ.24: ಶತಶತಮಾನಗಳಿಂದ ಹೆಣ್ಣು ಮಕ್ಕಳು, ಹಿಂದುಳಿದ ವರ್ಗ, ಶೂದ್ರ, ಮುಸ್ಲಿಮರು, ಕ್ರಿಶ್ಚಿಯನ್ನರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ಪರಿಗಣಿಸಿಕೊಂಡು ಬಂದ ಸಾವಿರಾರು ವರ್ಷಗಳ ಇತಿಹಾಸ ಇರುವ ಭಾರತಕ್ಕೆ ಅಂಬೇಡ್ಕರ್ ಸಮಾನವತೆ ಅವಕಾಶ ಕಲ್ಪಿಸಿ, ಸಮಸಮಾಜ ಕಟ್ಟಿದರು. ಇದನ್ನು ಒಪ್ಪಲಾರದ ಕೋಮುವಾದಿ, ಬ್ರಾಹ್ಮಣವಾದಿ, ಮನುವಾದಿ ಮನಸ್ಥಿತಿಗಳು ಅಂಬೇಡ್ಕರ್ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಸುತ್ತಿವೆ ಎಂದು ಹಿರಿಯ ಚಿಂತಕ ನಾರಾಯಣ ಮಣೂರು ಆರೋಪಿಸಿದ್ದಾರೆ.

ಸಂಸತ್ ಅಧಿವೇಶನದಲ್ಲಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಕುರಿತು ಕೇಂದ್ರ ಸಚಿವ ಅಮಿತ್ ಶಾ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ವತಿಯಿಂದ ಮಂಗಳವಾರ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಹಮ್ಮಿಕೊಳ್ಳಲಾದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ವೈದಿಕ ವಾದವನ್ನು ಪ್ರತಿಪಾದಿಸುವ ವ್ಯವಸ್ಥೆ ಪರವಾಗಿ ನಿಂತ ಸಂವಿಧಾನಬದ್ಧ ಹುದ್ದೆಯಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ತನ್ನ ವಿಷದ ಮನಸ್ಥಿತಿ ಯಿಂದ ಈ ದೇಶಕ್ಕೆ ಸಮಾನತೆಯ ಸಂವಿಧಾನ ನೀಡಿರುವ ಅಂಬೇಡ್ಕರ್‌ರನ್ನು ಅವಮಾನ ಮಾಡಿರುವುದು ಖಂಡನೀಯ. ಬಿಜೆಪಿ ಹಾಗೂ ಸಂಘಪರಿವಾರ ಜನರ ಮನಸ್ಸಿನಲ್ಲಿ ಜಾತಿಯ ವಿಷ ಬಿತ್ತುವ ವ್ಯವಸ್ಥಿತ ಕಾರ್ಯ ಮಾಡುತ್ತಿದೆ ಎಂದು ಅವರು ದೂರಿದರು.

ಅಮಿತ್ ಶಾ ಅಧಿಕೃತವಾಗಿ ತನ್ನ ಒಡಲಿನ ಒಳಗೆ ಇರುವ ಅಸಹನೆಯ ಬೆಂಕಿಯನ್ನು ಅಂಬೇಡ್ಕರ್ ಅವರನ್ನು ಅವಮಾನ ಮಾಡುವ ಮೂಲಕ ಹೊರ ಹಾಕಿದ್ದಾರೆ ಎಂದ ಅವರು, ಸಮಾನತೆಯ ಸಂವಿಧಾನವನ್ನು ನೀಡಿದ ಅಂಬೇಡ್ಕರ್ ವಿಷಯ ವನ್ನು ಮುಟ್ಟಿದರೆ ಅಮಿತ್ ಶಾ ಪರಿವಾರ ಬಹಳ ದೊಡ್ಡ ಬೆಲೆ ತೆರಬೇಕಾದೀತು. ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಇದಕ್ಕೆ ತಕ್ಕ ಉತ್ತರವನ್ನು ನಾಗರಿಕರು ನೀಡಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದರು.

ಪ್ರಗತಿಪರ ದೇಶವನ್ನು ಕಟ್ಟುವಲ್ಲಿ ತೊಡಕು ಉಂಟು ಮಾಡುವ ಕಾರಣಕ್ಕೆ ಅಂಬೇಡ್ಕರ್ ಬ್ರಾಹ್ಮಣವಾದ ಹಾಗೂ ಬಂಡವಾಳ ಶಾಹಿವಾದ ವಿರೋಧಿಸಿ ದ್ದರು. ಇಂದು ಕೋಮುವಾದಿ ಜಾತಿವಾದಿ ಮನಸ್ಥಿತಿಯ ರಾಜಕಾರಣಿಗಳು ವ್ಯವಸ್ಥಿತವಾಗಿ ಸಂವಿಧಾನವನ್ನು ಹಂತಹಂತವಾಗಿ ನಾಶ ಮಾಡುವ ಮೂಲಕ ಸಂಸದೀಯ ಮಾದರಿಯ ವ್ಯವಸ್ಥಿಯನ್ನು ದಿಕ್ಕರಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶ ಮಾಡಿ ಸರ್ವಾಧಿಕಾರಿ ಧೋರಣೆಯನ್ನು ಪ್ರತಿಪಾದಿಸಿಕೊಂಡು ಬರುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ, ದಲಿತ ಹೋರಾಟಗಾರ ಜಯನ್ ಮಲ್ಪೆ, ದಲಿತ ಮುಖಂಡ ಶೇಖರ್ ಹಾವಂಜೆ ಮಾತನಾಡಿದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ಮನುಸ್ಮತಿ ಸುಟ್ಟ ದಿನದ ಅಂಗವಾಗಿ ಮನುಸ್ಮತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು.

ಪ್ರತಿಭಟನೆಯಲ್ಲಿ ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್, ಯುವಸೇನೆ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ, ಸ್ಥಾಪಕಾಧ್ಯಕ್ಷ ಹರೀಶ್ ಸಾಲ್ಯಾನ್, ಸಿಐಟಿಯು ಮುಖಂಡ ವೆಂಕಟೇಶ್ ಕೋಣಿ, ಪ್ರಮುಖರಾದ ಮಹಾಬಲ ಕುಂದರ್, ಪ್ರಶಾಂತ್ ತೊಟ್ಟಂ ಮೊದಲಾದವರು ಉಪಸ್ಥಿತರಿದ್ದರು.

‘ಇಲ್ಲಿ ಬ್ರಾಹ್ಮಣ್ಯವಾದವನ್ನು ಹೇರಬೇಕು, ಅಂಬೇಡ್ಕರ್ ನೀಡಿದ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬೇಕು ಮತ್ತು ಸಂವಿಧಾನವನ್ನು ನಾಶ ಮಾಡಬೇಕೆಂಬ ಪಿತೂರಿ ಅಮಿತ್ ಶಾ ಹೇಳಿಕೆಯ ಹಿಂದೆ ಅಡಗಿದೆ. ಸಂವಿಧಾನ, ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡಬೇಕಾದ ಇವರೇ ಕಂಟಕರಾಗಿ ಬಿಟ್ಟಿದ್ದಾರೆ. ನಾಶ ಮಾಡುವ ಹೇಳಿಕೆ ನೀಡುತ್ತಿದ್ದಾರೆ. ಅಂಬೇಡ್ಕರ್ ನೀಡಿದ ಸಂವಿಧಾನ ಹಾಗೂ ಬುದ್ಧ ಚಿಂತನೆಯನ್ನು ಹಂತಹಂತವಾಗಿ ನಾಶ ಮಾಡುವ ಉದ್ದೇಶ ಇವರದ್ದಾಗಿದೆ. ಇದು ಇವರಿಗೆ ಈ ಜನ್ಮದಲ್ಲಿ ಸಾಧ್ಯವಿಲ್ಲ. ಸಂಘಪರಿವಾರ ಈ ಕುತಂತ್ರ ಯಶಸ್ವಿಯಾಗಲು ನಾವು ಬಿಡುವುದಿಲ್ಲ’

-ಜಯನ್ ಮಲ್ಪೆ, ಜನಪರ ಹೋರಾಟಗಾರ

Leave a Reply

Your email address will not be published. Required fields are marked *

error: Content is protected !!