ಅಂಗನವಾಡಿಗಳಲ್ಲಿ ಕ್ರಿಸ್ಮಸ್ ಆಚರಣೆ ಮಾಡಿದ ಉದ್ಯಾವರ ಸೌಹಾರ್ದ ಸಮಿತಿ
ಉದ್ಯಾವರ : ಸೌಹಾರ್ದ ಸಮಿತಿ ಉದ್ಯಾವರದ ನೇತೃತ್ವದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ 12 ಅಂಗನವಾಡಿಗಳಲ್ಲಿರುವ ಮಕ್ಕಳಿಗೆ, ಆಶಾ ಕಾರ್ಯಕರ್ತೆಯರಿಗೆ ಹಾಗೂ ಗ್ರಾಮ ಪಂಚಾಯತ್ ಸಿಬಂದಿಗಳಿಗೆ ಕ್ರಿಸ್ಮಸ್ ಸಿಹಿ ವಿತರಿಸಿ, ಕ್ರಿಸ್ಮಸ್ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಪ್ರಧಾನ ಧರ್ಮಗುರು ವo. ಅನಿಲ್ ಡಿಸೋಜ, ‘ಕ್ರಿಸ್ಮಸ್ ಹಬ್ಬ ಶಾಂತಿ, ಸೌಹಾರ್ದತೆ ಮತ್ತು ಕ್ಷಮಿಸುವ ಹಬ್ಬ. ದೇವರು ತಮ್ಮ ಏಕ ಮಾತ್ರ ಪುತ್ರನನ್ನು ಜಗತ್ತಿನ ಒಳಿತಿಗೋಸ್ಕರ ಅವರು ದಾರೆ ಎರೆದರು. ಯೇಸು ಸ್ವಾಮಿಯವರು ಪ್ರೀತಿಯ ಮೂಲಕ ಎಲ್ಲರ ಮನಸ್ಸು ಗೆದ್ದರು. ನಾವೆಲ್ಲರೂ ಒಂದೇ ದೇವರ ಮಕ್ಕಳು. ನಾವೆಲ್ಲರೂ ಜೊತೆಯಾಗಿ ಪ್ರೀತಿಯ ಸಂದೇಶವನ್ನು ಎಲ್ಲೆಡೆ ಪಸರಿಸೋಣ. ಮನೆಗಳಲ್ಲಿ ತೂಗು ಹಾಕಿರುವ ನಕ್ಷತ್ರದ ಬೆಳಕಿನಂತೆ ಸಮಾಜಕ್ಕೆ ನಾವು ಬೆಳಕಾಗೋಣ. ಒಬ್ಬರಿಗೊಬ್ಬರು ಕ್ಷಮಿಸುವ ಮೂಲಕ ದೇವರ ಪ್ರೀತಿಯ ಸಂದೇಶವನ್ನು ಹಂಚೋಣ’ ಎಂದು ಕ್ರಿಸ್ಮಸ್ ಸಂದೇಶವನ್ನು ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಧರ್ಮ ಗುರು ವಂ. ಸ್ಟೀಫನ್ ರೋಡ್ರಿಗಸ್, ಹಲಿಮಾ ಸಾಬ್ಜು ಆಡಿಟೋರಿಯಂ ಟ್ರಸ್ಟಿ ಹಾಜಿ ಅಬ್ದುಲ್ ಜಲೀಲ್ ಸಾಹೇಬ್, ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ನಿತಿನ್ ಸಾಲ್ಯಾನ್, ಉದ್ಯಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜೇಶ್ ಕುಂದರ್, ಪಂಚಾಯತ್ ಸದಸ್ಯರಾದ ರಿಯಾಜ್ ಪಳ್ಳಿ, ಆಶಾ ವಾಸು, ಆಬಿದ್ ಅಲಿ, ಶ್ರೀ ನಾರಾಯಣ ಗುರು ಯುವ ವೇದಿಕೆ ಗೌರವಾಧ್ಯಕ್ಷ ಸದಾಶಿವ ಆಮಿನ್, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ವಿಲ್ಫ್ರೆಡ್ ಡಿಸೋಜಾ, ಉದ್ಯಾವರ ಫ್ರೆಂಡ್ಸ್ ಸರ್ಕಲ್ ಗೌರವಾಧ್ಯಕ್ಷ ನಾಗೇಶ್ ಕುಮಾರ್, ಶಿಕ್ಷಕಿಯರಾದ ಗೀತಾ, ಅಕ್ಷತಾ, ಅಂಗನವಾಡಿ ಕಾರ್ಯಕರ್ತೆಯರು, ಸೌಹಾರ್ದ ಸಮಿತಿ ಮತ್ತು ಕಥೋಲಿಕ್ ಸಭಾದ ಸದಸ್ಯರು ಉಪಸ್ಥಿತರಿದ್ದರು.
ಉದ್ಯಾವರದ ಎಲ್ಲಾ ಆಶಾ ಕಾರ್ಯಕರ್ತೆಯರಿಗೂ ಹಾಗೂ ಗ್ರಾಮ ಪಂಚಾಯತ್ ಸಿಬಂದಿಗಳಿಗೂ ಕ್ರಿಸ್ಮಸ್ ಸಿಹಿ ಹಂಚಲಾಯಿತು.
ಸೌಹಾರ್ದ ಸಮಿತಿ ಅಧ್ಯಕ್ಷ ರೊಯ್ಸ್ ಫೆರ್ನಾಂಡಿಸ್ ಸ್ವಾಗತಿಸಿದರೆ, ಕಾರ್ಯದರ್ಶಿ ಪ್ರತಾಪ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.