ವಾಸುದೇವ ಸಾಮಗರ ಬದುಕು, ಬರಹಗಳು ಯಕ್ಷಗಾನಸಕ್ತರಿಗೆ ದಾರಿದೀಪ: ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು
ಉಡುಪಿ: ಯಕ್ಷಗಾನಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿ ಮೇರು ಕಲಾವಿದರಾಗಿ ಮೆರೆದ ದಿ.ಮಲ್ಪೆ ವಾಸುದೇವ ಸಾಮಗ ಅವರ ಬದುಕು ಅವರು ರಚಿಸಿದ ಯಕ್ಷಗಾನ ಕೃತಿಗಳು ಯಕ್ಷಗಾನಾಸಕ್ತರಿಗೆ ದಾರಿ ದೀಪಗಳಾಗಿವೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಶನಿವಾರ ಕುಂದಾಪುರ ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಯಶಸ್ವೀ ಕಲಾವೃಂದ ಕೋಮೆ ಹಾಗೂ ಸಂಯಮ ಕೋಟೇಶ್ವರ ಸಹಕಾರದಲ್ಲಿ ನಡೆದ ಖ್ಯಾತ ಯಕ್ಷಗಾನ ಕಲಾವಿದ ದಿ.ಮಲ್ಪೆ ವಾಸುದೇವ ಸಾಮಗ ಅವರ ೪ನೇ ಸಂಸ್ಮರಣಾ ಕಾರ್ಯಕ್ರಮ ಹಾಗೂ ವಾಸುದೇವ ಸಾಮಗ ಸಂಸ್ಮರಣಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
70ರ ದಶಕದಲ್ಲಿ ವಾಸುದೇವ ಸಾಮಗರ ಪರಿಚಯ ನನಗಾಗಿತ್ತು. ಅವರ ತಂದೆ ರಾಮದಾಸ ಸಾಮಗರು ದೊಡ್ಡ ಯಕ್ಷಗಾನ ಕಲಾವಿದರಾಗಿದ್ದರು. ಮುಂದೆ ವಾಸುದೇವ ಸಾಮಗ ಕೂಡಾ ತಂದೆಯ ಹಾದಿಯಲ್ಲಿ ಮುಂದುವರಿದು ಯಕ್ಷಗಾನದ ಮೇರು ಕಲಾವಿದರಾಗಿ ಬೆಳೆದಿರುವುದು ಇದೀಗ ಇತಿಹಾಸ. ಯಕ್ಷಗಾನ ಆಸಕ್ತರಿಗೆ, ಕಲಿಯುವವರಿಗೆ ಅವರು ಬರೆದ ಯಕ್ಷಗಾನ ಕೃತಿಗಳು ಮಾರ್ಗದರ್ಶಕಗಳಾಗಿವೆ. ಮಾತು ಒರಟಾಗಿದ್ದರೂ, ಹೃದಯ ಶ್ರೀಮಂತಿಕೆಯುಳ್ಳ, ಸರಳ ಸಜ್ಜನಿಕೆಯ ವ್ಯಕ್ತಿತ್ವ ಅವರದ್ದಾಗಿತ್ತು. ಮಗ ಪ್ರದೀಪ್ ಸಾಮಗ ಅವರನ್ನು ಯಕ್ಷಗಾನಕ್ಕೆ ಕರೆತಂದು ಪ್ರೋತ್ಸಾಹಿಸಿದ್ದಾರೆ. ಅವರ ಆದರ್ಶಗಳು ನಮಗೆಲ್ಲಾ ದಾರಿ ದೀಪವಾಗಲಿ ಎಂದರು.
ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಅವರು ಮಾತನಾಡಿ, ವಾಸುದೇವ ಸಾಮಗ ಅವರು ಯಕ್ಷಗಾನ ಹಾಗೂ ಯಕ್ಷಗಾನ ಕಲೆಯ ಬಗ್ಗೆ ಅತೀ ಕಾಳಜಿ ಹೊಂದಿದ್ದವರು. ಕಲಾರಂಗ ಹಮ್ಮಿಕೊಂ ಡ ಯಕ್ಷಗಾನ ಕಲಾವಿದರ ಸಮಾವೇಶಕ್ಕೆ ತಪ್ಪದೇ ಹಾಜರಾಗಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಸ್ವಾಭಿಮಾನಿಯಾಗಿ ಬದುಕಿದ್ದವರು. ಪ್ರತೀ ವರ್ಷ ಯಕ್ಷ ನಿಧಿಗೆ ದೊಡ್ಡ ಮೊತ್ತವನ್ನು ಕೊಟ್ಟು ಪ್ರೋತ್ಸಾಹಿಸಿದ್ದಾರೆ. ಅಲ್ಲದೆ ಸಂಘಸoಸ್ಥೆಗಳಿಗೂ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಿದ್ದಾರೆ. ಹರಿಕಥೆಯ ನ್ನು ಉತ್ತಮವಾಗಿ ನಡೆಸಿಕೊಡುತ್ತಿದ್ದವರು. ಒಬ್ಬ ಶ್ರೇಷ್ಠ ಸೃಜನಶೀಲ ಕಲಾವಿದರಾಗಿದ್ದರು ಎಂದರು. ವಾಸುದೇವ ಸಾಮಗ ಅವರ ಮಗ ಪ್ರದೀಪ್ ಸಾಮಗ ಮಾತನಾಡಿ, ಯಕ್ಷಗಾನ ಕಲಾವಿದರಾಗಿ ವಾಸುದೇವ ಸಾಮಗ ಅವರು ಯಕ್ಷಗಾನಕ್ಕೆ ಸಲ್ಲಿಸಿರುವ ಕೊಡುಗೆ ಯನ್ನು ಪ್ರಸ್ತಾಪಿಸಿದರು. ಕೊನೆ ಘಳಿಗೆಯ ಲ್ಲೂ ಅವರು ಬರೆಯುತ್ತಿದ್ದ, ಇದೀಗ ಪುಸ್ತಕರೂಪದಲ್ಲಿ ಪ್ರಕಟಗೊಂಡಿರುವ ‘ಯಕ್ಷ ರಸಾಯನ ‘ ಕೃತಿ ಪೂರ್ಣವಾಗವಾಗದಿರುವ ಬಗ್ಗೆ ಚಿಂತೆ ವ್ಯಕ್ತ ಪಡಿಸಿದ್ದರು. ಇದೀಗ ಅವರ 4ನೇ ಸಂಸ್ಮರಣೆ ಕಾರ್ಯಕ್ರಮದ ಪೂರ್ವದಲ್ಲಿ ಕೃತಿಯನ್ನು ಪ್ರಕಟಿಸಿ ಲೋಕಾರ್ಪಣೆ ಮಾಡಿದ್ದೇವೆ. ಹೀಗಾಗಿ ತಂದೆಯ ಆತ್ಮಕ್ಕೆ ಶಾಂತಿ ಸಿಕ್ಕಿರಬಹುದು ಎಂದರು.
ಕಾರ್ಯಕ್ರಮದಲ್ಲಿ ದಿ. ವಾಸುದೇವ ಸಾಮಗ ಅವರ ಒಡನಾಡಿಯಾಗಿದ್ದ ಖ್ಯಾತ ಸ್ತ್ರೀ ವೇಷಧಾರಿ ಎಮ್. ಎ. ನಾಯ್ಕ್ ಅವರಿಗೆ ವಾಸುದೇವ ಸಾಮಗ ಸಂಸ್ಮರಣಾ ಪ್ರಶಸ್ತಿಪ್ರದಾನ ಮಾಡಿ ಗೌರವಿಸಲಾ ಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಾಸುದೇವ ಸಾಮಗ ಅವರೊಂದಿಗೆ ಅನೇಕ ವರ್ಷಗಳ ಕಾಲ ಅವರೊಂದಿಗೆ ತಿರುಗಾಟ ನಡೆಸಿದ್ದೇನೆ. ಯಕ್ಷಲೋಕ ವಿಜಯದ ಪ್ರದೀಪನ ಪಾತ್ರ ಅವರ ಹಾಗೆ ಮಾಡಬಲ್ಲ ಮತ್ತೊಬ್ಬ ಕಲಾವಿದರಿಲ್ಲ. ಅವರ ಮೋಹನ ತರಂಗಿಣಿಯ ಮನ್ಮಥ, ಸಮಗ್ರ ಕಂಸದ ಕಂಸ, ಉತ್ತರನ ಪೌರುಷದ ಉತ್ತರ ಮೊದಲಾದ ಪಾತ್ರಗಳನ್ನು ಮರೆಯಲು ಸಾಧ್ಯವಿಲ್ಲ. ಅವರಿಂದ ನಾನು ಬಹಳಷ್ಟು ಕಲಿತ್ತಿದ್ದೇನೆ ಎಂದರು.
ಸoಸ್ಮರಣಾ ಕಾರ್ಯಕ್ರಮದಲ್ಲಿ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್. ಸಾಮಗ, ಪತ್ರಕರ್ತ ಬಾ.ಸಾಮಗ, ಮೇಳದ ಯಜಮಾನ ಪಿ.ಕಿಶನ್ ಹೆಗ್ಡೆ, ಅರ್ಥಧಾರಿ ಉಜಿರೆ ಅಶೋಕ್ ಭಟ್, ಯಶಸ್ವಿ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ, ಉದ್ಯಮಿ ಡಾ.ವೈಕುಂಠ ಹೇರ್ಳೆ, ಯಶಸ್ವಿ ಕಲಾವೃಂದದ ವೆಂಕಟೇಶ್ ವೈದ್ಯ, ಮೀರಾ ವಾಸುದೇವ ಸಾಮಗ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದಿ.ವಾಸುದೇವ ಸಾಮಗರು ಬರೆದ ‘ಯಕ್ಷ ರಸಾಯನ ‘ ಕೃತಿಯಿಂದ ಆಯ್ದ ಭಾಗಗಳ ಯುಗಳ ಸಂವಾದ (ತಾಳ ಮದ್ದಲೆ)ನಡೆಯಿತು. ದುರಂತ ನಾಯಕಿ ಯಕ್ಷ ನಾಟಕ ಪ್ರಸ್ತುತಿಗೊಂಡಿತು.