ಇಸ್ರೋ ವಿಜ್ಞಾನಿಗಳಿಂದ ಹೊಸ ಪ್ರಯೋಗ- ಬಾಹ್ಯಾಕಾಶದಲ್ಲಿ ಅಲಸಂಡೆ, ಪಾಲಕ್ ಬೆಳೆಯಲು ಪ್ಲಾನ್!
ಹೊಸದಿಲ್ಲಿ: ಬಾಹ್ಯಾಕಾಶದಲ್ಲಿ ಬೀಜ ಮೊಳೆಕೆಯೊಡೆಯುವಿಕೆಯ ಬಗ್ಗೆ ಅಧ್ಯಯನ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಮುಂದಾಗಿದೆ. ಇದಕ್ಕಾಗಿ ಅಲಸಂಡೆ ಮತ್ತು ಪಾಲಕ್ ಬೀಜಗಳನ್ನೊಳಗೊಂಡ ರಾಕೆಟನ್ನು ವರ್ಷಾಂತ್ಯಕ್ಕೆ ಹಾರಿಸಲಿದೆ.
ಸಸ್ಯ ಬೆಳವಣಿಗೆ ಬಗ್ಗೆ ಅಧ್ಯಯನ ಮಾಡಲು ರಾಕೆಟನ್ನೇ ಇಸ್ರೋ ಬಳಕೆ ಮಾಡಿಕೊಳ್ಳಲಿದೆ. ಉಪಗ್ರಹಗಳ ಜತೆಗೆ ಈ ರಾಕೆಟ್‌ನಲ್ಲಿ ಬೀಜಗಳನ್ನೊಳ ಗೊಂಡ ಟ್ಯೂಬ್ ಸಹ ಅಳವಡಿಸಲಾಗಿರುತ್ತದೆ. ಇದರಲ್ಲಿ ಗಿಡ ಬೆಳೆಯಲು ಶಾಖದ ವ್ಯವಸ್ಥೆ ಮಾಡಲಾಗಿದ್ದು, ಬಾಹ್ಯಾಕಾಶದಲ್ಲಿ ಇದು ಹೇಗೆ ಬೆಳೆಯಲಿದೆ ಎಂಬುದನ್ನು ಅಧ್ಯಯನ ಮಾಡಲಾಗುತ್ತದೆ.ಇದಕ್ಕಾಗಿ 8 ಅಲಸಂಡೆ ಹಾಗೂ ಪಾಲಕ್ ಬೀಜಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾ ಗುತ್ತಿದೆ. ಇವು 2 ಎಲೆ ಬಿಡುವವರೆಗೆ ಬೆಳವಣಿಗೆ ಹೇಗಿರಲಿದೆ ಎಂದು ಅಧ್ಯಯನ ಮಾಡಲಾಗುತ್ತದೆ ಎಂದು ಇಸ್ರೋ ಹೇಳಿದೆ.
ಬಾಹ್ಯಾಕಾಶ ಡಾಕಿಂಗ್ ಪರೀಕ್ಷೆ: ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಾಣ ಮಾಡಲು ಮುಂದಾಗಿರುವ ಇಸ್ರೋ 2 ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ಜೋಡಿಸುವ ಯೋಜನೆಯನ್ನೂ ಸಹ ಇದೇ ಯೋಜನೆಯ ಉಡಾವಣೆಯೊಂದಿಗೆ ಕೈಗೊಳ್ಳಲಿದೆ.