ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಸಾಂವಿಧಾನಿಕ ಬಿಕ್ಕಟ್ಟು-ಪ್ರಮೋದ್ ಮಧ್ವರಾಜ್
ಉಡುಪಿ: ರಾಜ್ಯ ಸರಕಾರ ಬಿಜೆಪಿಯ ನಾಯಕ ಸಿ.ಟಿ.ರವಿ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಶುಕ್ರವಾರ ಕಡಿಯಾಳಿಯಲ್ಲಿರುವ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ವಿಧಾನ ಸೌಧದಲ್ಲಿ ಶಾಸಕನನ್ನು ಯಾವುದೇ ಆದೇಶ, ಸಾಕ್ಷ್ಯಧಾರಗಳಿಲ್ಲದೇ ಬಂಧಿಸಿದ ಘಟನೆ ದೇಶದ 70 ವರ್ಷಗಳ ಸ್ವಾತಂತ್ರ್ಯ ಇತಿಹಾಸದಲ್ಲಿ ಪ್ರಪ್ರಥಮ ಬಾರಿ ರಾಜ್ಯದಲ್ಲಿ ನಡೆದಿದೆ. ಇದು ರಾಜ್ಯ ಸರಕಾರದ ಬರ್ಬರ ಕೃತ್ಯವಾಗಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಸಾಂವಿಧಾನಿಕ ಬಿಕ್ಕಟ್ಟು ತಲೆದೋರಿದೆ. ಆದ್ದರಿಂದ ರಾಜ್ಯಪಾಲರು ಮಧ್ಯ ಪ್ರವೇಶಿಸಿ, ರಾಜ್ಯ ಸರಕಾರವನ್ನು ಬರ್ಕಾಸ್ತುಗೊಳಿಸಬೇಕು. ರಾಜ್ಯ ಸರಕಾರದ ವಕ್ಫ್, ಮೂಡಾ, ವಾಲ್ಮೀಕಿ ನಿಗಮದ ಹಗರಣಗಳನ್ನು ಬಿಜೆಪಿ ಅದರಲ್ಲೂ ವಿಶೇಷವಾಗಿ ಸಿ.ಟಿ.ರವಿ ಹೊರ ಹಾಕುತ್ತಿದ್ದಾರೆ. ಇದರಿಂದ ಕೆರಳಿದ ಕಾಂಗ್ರೆಸ್ ಸರ್ಕಾರ ಅವರ ಮೇಲೆ ಸೇಡು ತೀರಿಸಿಕೊಂಡಿದೆ ಎಂದು ಅವರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ನಾಯಕರಾದ ಕಿರಣ್ ಕುಮಾರ್ ಬೈಲೂರು, ಶ್ರೀನಿಧಿ ಹೆಗ್ಡೆ, ಶಶಾಂಕ್ ಶಿವತ್ತಾಯ, ಶ್ಯಾಮಲಾ ಕುಂದರ್, ಶಿಲ್ಪಾ ಸುವರ್ಣ, ಶ್ರೀಕಾಂತ್ ನಾಯಕ್, ಶ್ರೀಕಾಂತ್ ಕಾಮತ್, ಶಿವಕುಮಾರ್, ವಿಜಯಕುಮಾರ್ ಕೊಡವೂರು, ರಾಜೇಶ್ ಕಾವೇರಿ, ಪ್ರಭಾಕರ ಪೂಜಾರಿ, ಪೃಥ್ವಿರಾಜ್ ಶೆಟ್ಟಿ, ಉಮೇಶ್ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.