ಉಡುಪಿ: ಡಿ.21ರಿಂದ ರೋಟರಿ ಕ್ಲಬ್‌ಗಳ ‘ರೋಟಾ ಮ್ಯಾಜಿಕ್’ ಸ್ಪೋರ್ಟ್ಸ್

ಉಡುಪಿ, ಡಿ.21: ರೋಟರಿ ಕ್ಲಬ್ ಮಣಿಪಾಲ ಹಾಗೂ ರೋಟರಿ ಜಿಲ್ಲಾ ಕ್ರೀಡಾ ಸಮಿತಿಯ ಜಂಟಿ ಆಶ್ರಯದಲ್ಲಿ ರೋಟರಿ ಜಿಲ್ಲೆ 3182ರ ‘ರೋಟಾ ಮ್ಯಾಜಿಕ್’ ಕ್ರೀಡಾಸ್ಪರ್ಧೆಗಳು ಡಿ.21 ಮತ್ತು 22ರಂದು ಉಡುಪಿ ಅಜ್ಜರಕಾಡಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ವಲಯ-4ರ ಸಹಾಯಕ ಗವರ್ನರ್ ಜಗನ್ನಾಥ್ ಕೋಟೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟದಲ್ಲ ರೋಟರಿ 3182ರ ವ್ಯಾಪ್ತಿಗೆ ಸೇರಿದ ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಹಾಸನ ಜಿಲ್ಲೆಗಳ ರೋಟರಿ ಕ್ಲಬ್‌ಗಳ ಸದಸ್ಯರು ಹಾಗೂ ಆವರ ಕುಟುಂಬಗಳ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ಎರಡು ದಿನಗಳಲ್ಲಿ ಅಥ್ಲೆಟಿಕ್ ಸೇರಿದಂತೆ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳು, ಕ್ರಿಕೆಟ್, ವಾಲಿಬಾಲ್, ಈಜು, ಬ್ಯಾಡ್ಮಿಂಟನ್, ಟಗ್ ಆಫ್ ವಾರ್ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಕೆಲವು ಸ್ಪರ್ಧೆಗಳು ಹೊನಲು ಬೆಳಕಿನಲ್ಲೂ ನಡೆಯಲಿವೆ ಎಂದರು.

ರೋಟರಿ ಕುಟುಂಬದ ಎಲ್ಲಾ ಸದಸ್ಯರಿಗೂ ಸ್ಪರ್ಧೆಗಳಿವೆ. 8 ವರ್ಷದ ಮಕ್ಕಳಿಂದ 70ವರ್ಷ ಹಿರಿಯರವರೆಗೆ ಎಲ್ಲರಿಗೂ ವಿವಿಧ ಸ್ಪರ್ಧೆಗಳು ನಡೆಯಲಿವೆ ಎಂದರು. ಸ್ಪರ್ಧೆಯ ಉದ್ಘಾಟನೆ ಡಿ.21 ರ ಸಂಜೆ 4:30ಕ್ಕೆ ನಡೆಯಲಿದ್ದು, ಇದರಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳಾದ ಪುಷ್ಪರಾಜ್ ಹೆಗ್ಡೆ, ಧೀರಜ್ ಭಂಡಾರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಭಾಗವಹಿಸುವರು ಎಂದರು.

ಸಮಾರೋಪ ಸಮಾರಂಭ ಡಿ.22ರ ಅಪರಾಹ್ನ 3ಕ್ಕೆ ನಡೆಯಲಿದ್ದು, ಶಾಸಕ ಯಶಪಾಲ್ ಸುವರ್ಣ ಹಾಗೂ ಜಿಲ್ಲಾ ಕ್ರೀಡಾಧಿಕಾರಿ ಡಾ.ರೋಶನ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿರುವರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕ್ರೀಡಾ ಸಭಾಪತಿ ಅಮಿತ್ ಅರವಿಂದ, ಉಪಸಭಾಪತಿ ಡಾ.ಕೆಂಪರಾಜ್ ಎಚ್.ಬಿ., ರೋಟರಿ ಕ್ಲಬ್‌ನ ರೇಣು ಜಯರಾಮ್, ಪ್ರಶಾಂತ್ ಹೆಗ್ಡೆ, ಸುಭಾಸ್ ಬಂಗೇರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!