ಕಾರ್ಕಳ: 15 ವರ್ಷ ಪ್ರಾಯದ ಬಾಲಕಿಗೆ ಲೈಂಗಿಕ ದೌರ್ಜನ್ಯ- ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ
ಉಡುಪಿ, ಡಿ.19: ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 15 ವರ್ಷ ಪ್ರಾಯದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯನ್ನಾಗಿಸಿದ ಪ್ರಕರಣದ ಆರೋಪಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಪೊಕ್ಸೋ ವಿಶೇಷ ನ್ಯಾಯಾಲಯವು 20ವರ್ಷಗಳ ಕಾಲ ಕಠಿಣ ಜೈಲುಶಿಕ್ಷೆ ವಿಧಿಸಿ ಇಂದು ಆದೇಶ ನೀಡಿದೆ.
ಕಾರ್ಕಳದ ಚಂದ್ರಶೇಖರ್(34) ಶಿಕ್ಷೆಗೆ ಗುರಿಯಾದ ಆರೋಪಿ. ಬಾಲಕಿ ಯನ್ನು ಪರಿಚಯಿಸಿಕೊಂಡ ಆರೋಪಿಯು ಆಕೆಯನ್ನು ಕರೆ ಮಾಡಿ ಬೇರೆ ಮನೆಗೆ ಮತ್ತು ಹಾಡಿಗೆ ಬರುವಂತೆ ತಿಳಿಸಿ ಬೆದರಿಕೆ ಹಾಕಿದ್ದನು. ಅದರಂತೆ ಬಾಲಕಿಯು ರಾತ್ರಿ ಸಮಯದಲ್ಲಿ ಹಾಡಿಗೆ ಹೋಗಿದ್ದು, ಆ ವೇಳೆ ಆರೋಪಿಯು ಬಾಲಕಿಯೊಂದಿಗೆ ಒತ್ತಾಯ ಪೂರ್ವಕ ದೈಹಿಕ ಸಂಬಂಧ ನಡೆಸಿದ್ದನು.
ಇದರಿಂದ ಬಾಲಕಿಗೆ ಆರೋಗ್ಯದಲ್ಲಿ ಏರುಪೇರು ಆದ ಕಾರಣ ಆಕೆಯನ್ನು ಆಸ್ಪತ್ರೆಗೆ ಕರೆದು ಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಆಕೆ ಗರ್ಭಿಣಿ ಎಂದು ತಿಳಿದ್ದರು. ಬಳಿಕ ಬಾಲಕಿಯುನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತೆನ್ನಲಾಗಿದೆ. ಅದರಂತೆ ಬಾಲಕಿಯ ತಾಯಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು.
ನಂತರ ಬಾಲಕಿಯು ತನಗೆ ಇತರ ಮೂರು ಆರೋಪಿಗಳು ಲೈಂಗಿಕ ಕಿರುಕುಳ ನೀಡುತ್ತಾರೆಂದು ತಿಳಿಸಿದಂತೆ ಒಟ್ಟು ನಾಲ್ಕು ಆರೋಪಿಗಳ ವಿರುದ್ಧ ಆಗಿನ ಕಾರ್ಕಳ ವೃತ್ತ ಪೊಲೀಸ್ ನಿರೀಕ್ಷಕ ನಾಗೇಶ್ ಕೆ. ದೋಷಾರೋಪಣಾ ಸಲ್ಲಿಸಿದ್ದರು. ಒಟ್ಟು 45 ಸಾಕ್ಷಿಗಳ ಪೈಕಿ 26 ಸಾಕ್ಷಿಗಳನ್ನು ವಿಚಾರಣೆ ಮಾಡಲಾಗಿದ್ದು, ಒಂದನೇ ಆರೋಪಿ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವುದು ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಆರೋಪಿಗೆ 20ವರ್ಷಗಳ ಕಠಿಣ ಶಿಕ್ಷೆ ಮತ್ತು 21ಸಾವಿರ ರೂ.ದಂಡ ವಿಧಿಸಿ ಆದೇಶ ನೀಡಿದರು.
ದಂಡದ ಮೊತ್ತದಲ್ಲಿ 6ಸಾವಿರ ರೂ. ಸರಕಾರಕ್ಕೆ 15ಸಾವಿರ ರೂ. ನೊಂದ ಬಾಲಕಿಗೆ ಮತ್ತು 3ಲಕ್ಷ ರೂ. ಸರಕಾರದಿಂದ ಪರಿಹಾರ ನೀಡುವಂತೆ ನ್ಯಾಯಾಧೀಶರು ನಿರ್ದೇಶನ ನೀಡಿದರು. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದ ಮಂಡಿಸಿದ್ದರು.