ಸೈಬರ್ ಕ್ರೈಮ್, ಆನ್‌ಲೈನ್ ವಂಚನೆ ಪೋಲಿಸರಿಗೆ ಹೊಸ ಸವಾಲು ಎಸ್ಪಿ ಡಾ. ಅರುಣ್
ಉಡುಪಿ, ಡಿ.19: ಆಧುನಿಕ ತಂತ್ರಜ್ಞಾನದಲ್ಲಿ ಮುಂದುವರಿಯುತ್ತಿರುವ ಇಂದಿನ ಜಗತ್ತಿನಲ್ಲಿ ಸೈಬರ್ ಕ್ರೈಮ್, ಆನ್‌ಲೈನ್ ವಂಚನೆ ಪ್ರಕರಣಗಳು ಪೋಲಿಸ್ ಇಲಾಖೆಗೆ ಹೊಸ ಸವಾಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ. ಹೇಳಿದ್ದಾರೆ.
ಉಡುಪಿ ಜಿಲ್ಲಾ ಪೋಲಿಸ್, ಉಡುಪಿ ಉಪ ವಿಭಾಗದ ವತಿಯಿಂದ ಗುರುವಾರ ಬನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ ಅಪರಾಧ ತಡೆ ಮಾಸಾಚರಣೆ -2024 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸೈಬರ್ ಕ್ರೈಮ್‌ಗಳನ್ನು ಕೃತ್ಯ ಆಗುವ ಮೊದಲೇ ತಡೆಗಟ್ಟಲು ಸಾಧ್ಯವಿದೆ. ಸೈಬರ್ ವಂಚನೆ ಬೆಳಕಿಗೆ ಬಂದ ತಕ್ಷಣ 193 ಕಾಲ್ ಮಾಡಿ ಮಾಹಿತಿ ನೀಡಿದರೇ ತಮ್ಮ ಬ್ಯಾಂಕ್ ಖಾತೆಯಲ್ಲಿನ ಹಣವನ್ನು ಫ್ರೀಝ್ ಮಾಡಯಬಹುದಾಗಿದೆ. ಜೊತೆಗೆ ಆಧಾರ್ ಕಾರ್ಡ್‌ಗಳಿಗೆ ಬಯೋಮೆಟ್ರಿಕ್ ಲಾಕ್ ಅನ್ನು ಬಳಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸಬೇಕು. ಕಾರು ಚಾಲಕರು ಸೀಟ್ ಬೆಲ್ಟ್ ಹಾಕಿಕೊಂಡೇ ಕಾರು ಓಡಿಸಬೇಕು ಎಂಬ ಕಾನೂನು ಇದೆ. ಇದು ಕೇವಲ ಕಾನೂನಲ್ಲ, ವಾಹನ ಚಾಲಕರ ಜೀವವನ್ನು ಉಳಿಸಲು ಸಹಕಾರಿಯಾಗಿದೆ. ಅನೇಕ ಅಪಘಾತ ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸಿದವರು, ಸೀಟ್ ಬೆಲ್ಟ್ ಹಾಕಿಕೊಂಡವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಹೀಗಾಗಿ ಕಾನೂನಿನ ಪಾಲನೆ ಎಂದು ಅರಿಯದೇ ನಮ್ಮ ಜೀವವನ್ನು ಉಳಿಸಿಕೊಳ್ಳಲು ಮುಂಜಾಗ್ರತಾ ಕ್ರಮವನ್ನು ವಹಿಸಬೇಕು ಎಂದರು.
ಮನೆ ಕಳ್ಳತನ, ಸರ ಕಳ್ಳತನಗಳು ನಡೆಯುತ್ತಿರುತ್ತದೆ. ಇದಕ್ಕೆ ಈಗಾಗಲೇ ಸಾರ್ವಜನಿಕರಿಗೆ ಮನೆಯಲ್ಲಿ ಬೆಲೆಬಾಳುವ ವಸ್ತುಗಳನ್ನು ಇಡಬೇಡಿ, ಪ್ರವಾಸಕ್ಕೆ ತೆರಳುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಳ್ಳ ಬೇಡಿ ಎಂದು ತಿಳಿಸಲಾಗಿದೆ. ಇಂತಹ ಸಂದರ್ಭದಲ್ಲಿ ತುರ್ತು ಸೇವೆ 112 ಗೆ ಕರೆ ಮಾಡಬೇಕು ಎಂದು ಅವರು ಮಾಹಿತಿ ನೀಡಿದರು.
ಇದೇ ಸಂದರ್ಭ ಸಾರ್ವಜನಿಕರಲ್ಲಿ ಅಪರಾಧ ಕೃತ್ಯ ಮತ್ತು ಜಾಗೃತಿ ಮೂಡಿಸುವ ಕರಪತ್ರ ಬಿಡುಗಡೆ ಗೊಳಿಸಲಾಯಿತು. ಮುಖ್ಯ ಅತಿಥಿಗಳಾಗಿ ಹಾಸ್ಯ ಕಲಾವಿದ ಅರವಿಂದ್ ಬೋಳಾರ್, ಡೈಜಿವರ್ಲ್ಡ್ ವಾಹಿನಿಯ ಮುಖ್ಯಸ್ಥ ವಾಲ್ಟರ್ ನಂದಳಿಕೆ, ಮಧುಮೇಹ ತಜ್ಞೆ ಡಾ.ಶ್ರುತಿ ಬಲ್ಲಾಳ್, ಮಾಡೆಲ್ ಸ್ಪೂರ್ತಿ ಶೆಟ್ಟಿ ಮಾತನಾಡಿದರು.
ವೇದಿಕೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಪರಮೇಶ್ವರ್ ಹೆಗಡೆ, ಉಡುಪಿ ಡಿವೈಎಸ್ಪಿ ಡಿ.ಟಿ.ಪ್ರಭು ಉಪಸ್ಥಿತರಿದ್ದರು. ಬ್ರಹ್ಮಾವರ ವೃತ್ತ ಪೊಲೀಸ್ ನಿರೀಕ್ಷಕ ದಿವಾಕರ್ ಸ್ವಾಗತಿಸಿದರು. ಅನಿತಾ ಚೇತನ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ನಗರದ ಬೋರ್ಡ್ ಹೈಸ್ಕೂಲು ಮುಂಭಾಗದಲ್ಲಿ ಜಾಥಾಕ್ಕೆ ಜಿಲ್ಲಾ ಎಸ್ಪಿಡಾ.ಅರುಣ್ ಚಾಲನೆ ನೀಡಿದರು. ಜಾಥವು ಶಿರೀಬೀಡು ಮಾರ್ಗವಾಗಿ ಬನ್ನಂಜೆಯ ಸಭಾಭವನ ವನ್ನು ತಲುಪಿತು. ನಗರದ ಕಾಲೇಜು, ನರ್ಸಿಂಗ್ ವಿದ್ಯಾರ್ಥಿಗಳು ಜಾಥದಲ್ಲಿ ಭಾಗವಹಿಸಿ ಸಾರ್ವಜನಿಕರಿಗೆ ಮಾಹಿತಿಗಳನ್ನು ನೀಡಿದರು.
‘ಜಿಲ್ಲೆಯಲ್ಲಿ ರಸ್ತೆ ಅಪಘಾತದಿಂದ ಸರಾಸರಿ ಒಂದೂವರೆ ದಿನಕ್ಕೆ ಒಬ್ಬರಂತೆ ಜೀವ ಕಳೆದುಕೊಳ್ಳುತ್ತಿದ್ದು, ಪ್ರತಿ ವರ್ಷ 250 ಮಂದಿ ಸಾವನ್ನಪ್ಪುತ್ತಿದ್ದಾರೆ. ವಾಹನ ಚಾಲನೆಯ ವೇಳೆ ಅಗತ್ಯ ಮುಂಜಾಗೃತ ಕ್ರಮಗಳನ್ನು ವಹಿಸಿದರೆ ಅಪಘಾತಗಳನ್ನು ತಡೆಗಟ್ಟಬಹುದಾಗಿದೆ- ಡಾ.ಕೆ. ಅರುಣ್, ಎಸ್ಪಿ ಉಡುಪಿ